ಅವರು ನನಗೆ ಸ್ಲೋ ಪಾಯ್ಸನ್​ ಕೊಡುತ್ತಿದ್ದರು... ಕಣ್ಣೀರಿಟ್ಟ ಖ್ಯಾತ ಖಳನಟ ಪೊನ್ನಂಬಲಂ! Actor Ponnambalam

ಖ್ಯಾತ ಖಳನಟ ಪೊನ್ನಂಬಲಂ
ಖ್ಯಾತ ಖಳನಟ ಪೊನ್ನಂಬಲಂ
Published on

ಪ್ರಮುಖ ಮುಖ್ಯಾಂಶಗಳು

  • ಖ್ಯಾತ ಖಳನಟ ಪೊನ್ನಂಬಲಂ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ
  • ಒಂದು ಕಾಲದಲ್ಲಿ ವಿಲನ್​ ಆಗಿ ಸ್ಟಾರ್​ ನಟರ ಮುಂದೆ ಅಬ್ಬರಿಸಿದ್ದರು
  • ಕನ್ನಡದಲ್ಲಿ ಚಿನ್ನ, ದೊರೆ, ಕಿಚ್ಚ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ
  • ಇತ್ತೀಚನ ಸಂದರ್ಶನದಲ್ಲಿ ಶಾಕಿಂಗ್​ ಸಂಗತಿ ಬಿಚ್ಚಿಟ್ಟ ಖಳನಟ ಪೊನ್ನಂಬಲಂ
Actor Ponnambalam : ಖ್ಯಾತ ಖಳನಟ ಪೊನ್ನಂಬಲಂ ಅವರು ವೀಲ್‌ಚೇರ್ ಮೇಲೆ ಕುಳಿತು ಬೀದಿಯಲ್ಲಿ ಡಾನ್ಸ್​ ಮಾಡಿದ ವಿಡಿಯೋವೊಂದು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಆ ವಿಡಿಯೋ ಬಗ್ಗೆ ಮಾತನಾಡಿರುವ ಪೊನ್ನಂಬಲಂ ಶಾಕಿಂಗ್​ ಸಂಗತಿಯೊಂದನ್ನು ಬಿಚ್ಚಿಟ್ಟಿದ್ದಾರೆ.
ಒಂದು ಕಾಲದಲ್ಲಿ ಖಳನಾಯಕನ ಪಾತ್ರಗಳಲ್ಲಿ ಹಾಗೂ ಸಾಹಸಮಯ ದೃಶ್ಯಗಳಲ್ಲಿ ನಟಿಸಿ, ಸಿಕ್ಕಾಪಟ್ಟೆ ಖ್ಯಾತಿ ಗಳಿಸಿದ್ದ ನಟ ಪೊನ್ನಂಬಲಂ, ಇತ್ತೀಚೆಗೆ ವೀಲ್‌ಚೇರ್‌ನಲ್ಲಿ ಕುಳಿತು ಡಾನ್ಸ್​ ಮಾಡಿದ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ನೋಡಿದ ಅನೇಕರು ಪೊನ್ನಂಬಲಂ ಅವರಿಗೆ ಏನಾಯಿತು ಎಂದು ಪ್ರಶ್ನೆ ಮಾಡಿದ್ದರು.
ಇದೀಗ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ತಾನು ಈ ಸ್ಥಿತಿಗೆ ಬರಲು ಕಾರಣ ಏನೆಂಬುದನ್ನು ಪೊನ್ನಂಬಲಂ ಅವರು ಬಹಿರಂಗಪಡಿಸಿದ್ದಾರೆ. ನಾನು ವೀಲ್‌ಚೇರ್‌ನಲ್ಲಿ ಕುಳಿತು ನೃತ್ಯ ಮಾಡಲು ನನ್ನ ತಂಗಿಯೇ ಕಾರಣ. ಆಕೆ ನನ್ನನ್ನು ನನ್ನ ತಾಯಿಯಷ್ಟೇ ಬೆಳೆಸಿದಳು. ಏನೇ ಆದರೂ, ನಾನಿದ್ದೇನೆ ಎಂದು ಹೇಳುತ್ತಿದ್ದಳು. ಇಂದು ಬೆಳಗ್ಗೆ ಆಕೆ ಹೃದಯಾಘಾತದಿಂದ ನಿಧನಳಾದಳು. ಆಕೆಯ ಸಾವಿನ ನೋವು ನನಗೆ ಸಹಿಸಲು ಆಗಲಿಲ್ಲ. ಆದ್ದರಿಂದ, ನಾನು ನನ್ನ ದುಃಖವನ್ನು ಕಡಿಮೆ ಮಾಡಿಕೊಳ್ಳಲು ಕುಳಿತಲ್ಲೇ ನೃತ್ಯ ಮಾಡಿದೆ ಎಂದು ಪೊನ್ನಂಬಲಂ ಹೇಳಿದರು.
ನಾನು ಇಲ್ಲಿ ಹೀಗೆ ಕುಳಿತಿದ್ದೇನೆ ಅಂದರೆ, ಅದಕ್ಕೆ ಕಾರಣ ನನ್ನ ಸಹೋದರ. ನನ್ನೊಂದಿಗೆ ಜನಿಸಿದ ನನ್ನ ಸಹೋದರ ನನ್ನ ಮೇಲೆಯೇ ಮಾಟಮಂತ್ರವನ್ನು ಪ್ರಯೋಗಿಸಿದ್ದಾನೆ. ಕುಟುಂಬದಲ್ಲಿ ಕೆಲವು ಸಮಸ್ಯೆಗಳಿವೆ. ನನ್ನ ಸಹೋದರನಿಗೆ ನನ್ನ ಮೇಲೆ ಅಸೂಯೆ ಇದೆ. ಹೀಗಾಗಿಯೇ ನನಗೆ ಗೊತ್ತಿಲ್ಲದೇ ಸ್ಲೋ ಪಾಯ್ಸನ್​ ನೀಡುತ್ತಿದ್ದರು. ಆ ವಿಷ ನನ್ನ ಕರುಳನ್ನು ನಾಶ ಮಾಡಿತು. ನಾನು ಮೂರು ವರ್ಷಗಳ ಕಾಲ ಅತಿಸಾರದಿಂದ ಬಳಲುತ್ತಿದ್ದೆ ಮತ್ತು ನನ್ನ ಇಡೀ ದೇಹವು ನಾಶವಾಯಿತು. ಇದಿಷ್ಟೇ ಅಲ್ಲ, ಒಂದು ದಿನ ನನ್ನ ಸಹೋದರ ನಾನು ಕುಡಿದ ಬಿಯರ್‌ನಲ್ಲಿ ಸ್ಲೋ ಪಾಯ್ಸನ್​ ಬೆರೆಸಿದ. ಅದರಿಂದಾಗಿಯೇ ನನ್ನ ಮೂತ್ರಪಿಂಡ ಕೆಟ್ಟುಹೋಯಿತು ಎಂದು ನಟ ಪೊನ್ನಂಬಲಂ ಕಣ್ಣೀರು ಸುರಿಸುತ್ತಾ ಹೇಳಿದರು.
ಅಂದಹಾಗೆ, ಖ್ಯಾತ ಖಳನಟ ಪೊನ್ನಂಬಲಂ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಒಂದು ಕಾಲದಲ್ಲಿ ವಿಲನ್​ ಆಗಿ ಸ್ಟಾರ್​ ನಟರ ಮುಂದೆ ಅಬ್ಬರಿಸಿದ್ದರು. ಕನ್ನಡದಲ್ಲಿ ಚಿನ್ನ, ದೊರೆ, ಲೇಡಿ ಕಮಿಷನರ್​, ಓ ನನ್ನ ನಲ್ಲೆ, ಕಿಚ್ಚ, ಅಣ್ಣಾವ್ರು, ಗುನ್ನ, ಮಸ್ತಿ ಹಾಗೂ ಪೊಲೀಸ್​ ಸ್ಟೋರಿ ಸಿನಿಮಾಗಳಲ್ಲಿ ನಟಿಸುವ ಮೂಲಕ ಕನ್ನಡಿಗರಿಗೂ ಪೊನ್ನಂಬಲಂ ಅವರು ಪರಿಚಿತರಾಗಿದ್ದಾರೆ.
ಪೊನ್ನಂಬಲಂ ಅವರು ಖಳನಾಯಕನ ಪಾತ್ರದಲ್ಲಿ ನಟಿಸುವ ಮೂಲಕ ಜನರ ಹೃದಯದಲ್ಲಿ ಅಳಿಸಲಾಗದ ಛಾಪು ಮೂಡಿಸಿದ್ದಾರೆ. ಕಮಲ್ ಹಾಸನ್, ರಜನಿಕಾಂತ್, ವಿಜಯಕಾಂತ್ ಮತ್ತು ಶರತ್‌ಕುಮಾರ್ ಸೇರಿದಂತೆ ಪ್ರಮುಖ ನಟರ ಚಿತ್ರಗಳಲ್ಲಿ ಖಳನಾಯಕರ ಪಾತ್ರಗಳನ್ನು ನಿರ್ವಹಿಸಿದರು. ಕನ್ನಡದಲ್ಲಿ ರವಿಚಂದ್ರನ್​, ಶಿವರಾಜ್​ಕುಮಾರ್​ ಹಾಗೂ ಸುದೀಪ್​ ಸಿನಿಮಾಗಳಲ್ಲಿ ಖಳನಾಯಕನಾಗಿ ಮಿಂಚಿದರು. ಕೆಲವು ಚಿತ್ರಗಳಲ್ಲಿ ಅತಿಥಿ ಪಾತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.
ತಮಿಳು ಮಾತ್ರವಲ್ಲದೆ ಮಲಯಾಳಂ, ಕನ್ನಡ, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿಯೂ ನಟಿಸಿರುವ ಪೊನ್ನಂಬಲಂ, ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಪ್ರಮುಖ ವ್ಯಕ್ತಿಯಾಗಿ ಹೆಸರುವಾಸಿಯಾಗಿದ್ದಾರೆ. ತಮ್ಮ ಅದ್ಭುತ ನಟನೆ ಮತ್ತು ಖಡಕ್​ ಲುಕ್​ನಿಂದ ಖಳನಾಯಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದರು. 90ರ ದಶಕದ ಖಳನಾಯಕನ ಪಾತ್ರಗಳಲ್ಲಿ ಪೊನ್ನಂಬಲಂ ಭಾರಿ ಬೇಡಿಕೆ ಸೃಷ್ಟಿ ಮಾಡಿದ್ದರು.
ಒಂದು ಕಾಲದಲ್ಲಿ ಖಡಕ್​ ಖಳನಾಯಕನಾಗಿ ಸಾಹಸಮಯ ಸಿನಿಮಾಗಳಲ್ಲಿ ನಟಿಸುತ್ತಿದ್ದ ಪೊನ್ನಂಬಲಂ, ಇಂದು ನಡೆಯಲು ಸಾಧ್ಯವಾಗದೆ ವೀಲ್‌ಚೇರ್‌ಗೆ ಸೀಮಿತವಾಗಿದ್ದಾರೆ. ಇದು ಅಭಿಮಾನಿಗಳಿಗೆ ತೀವ್ರ ನೋವನ್ನುಂಟುಮಾಡುತ್ತಿದೆ. ಪೊನ್ನಂಬಲಂ ಅವರು 2023ರಲ್ಲಿ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಪಡೆಯಲು ಅವರ ಬಳಿ ಸಾಕಷ್ಟು ಹಣವಿರಲಿಲ್ಲ. ಹೀಗಾಗಿ, ಸಹಾಯ ಕೋರಿ ವಿಡಿಯೋವೊಂದನ್ನು ಬಿಡುಗಡೆ ಮಾಡಿದರು.
ಪೊನ್ನಂಬಲಂ ಅವರ ವಿಡಿಯೋ ನೋಡಿದ ನಟ ಚಿರಂಜೀವಿ, ಶರತ್‌ಕುಮಾರ್, ಧನುಷ್, ನಿಜಲ್‌ಗಲ್ ರವಿ, ಮೋಹನ್, ಕಮಲ್ ಹಾಸನ್, ಸಿಂಬು ಮತ್ತು ಕೆ.ಎಸ್. ರವಿಕುಮಾರ್ ಸೇರಿದಂತೆ ಅನೇಕ ಚಲನಚಿತ್ರ ಗಣ್ಯರು ಅವರಿಗೆ ಸಹಾಯ ಮಾಡಿದರು. ಅದಾದ ನಂತರ ಅವರ ದೈಹಿಕ ಸ್ಥಿತಿ ಸ್ವಲ್ಪ ಸುಧಾರಿಸಿತು. ಇದಾದ ನಂತರ, ವಿಜಯ್ ಟಿವಿಯಲ್ಲಿ ಪ್ರಸಾರವಾದ "ಬಿಗ್ ಬಾಸ್" ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದರು.
ಬಿಗ್​ಬಾಸ್​ ಶೋನಲ್ಲಿ ಪೊನ್ನಂಬಲಂ ಅವರು ಮಾತನಾಡಿದ ಜೀವನ ಅನುಭವಗಳು ಅಭಿಮಾನಿಗಳಿಂದ ಹೆಚ್ಚಿನ ಗಮನ ಸೆಳೆದವು. ದಿನಗಳು ಕಳೆದಂತೆ ನಟ ಪೊನ್ನಂಬಲಂ ಅವರ ಆರೋಗ್ಯ ಮತ್ತೆ ಕ್ಷೀಣಿಸಿತು. ಇದರಿಂದಾಗಿ ದೀರ್ಘಕಾಲದಿಂದ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ರೋಗ ಸಂಪೂರ್ಣವಾಗಿ ಗುಣಮುಖವಾಗಿಲ್ಲ. ಪ್ರಸ್ತುತ ವಾರದಲ್ಲಿ 2 ರಿಂದ 3 ದಿನ ಡಯಾಲಿಸಿಸ್ ಮಾಡಿಸಿಕೊಳ್ಳುತ್ತಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net