ಯಾರು ಈ ಕೆನಿಶಾ? 18ನೇ ವಯಸ್ಸಲ್ಲಿ ಮದ್ವೆ, 19ನೇ ವಯಸ್ಸಲ್ಲಿ ಗರ್ಭಪಾತ, ಬೆಂಗ್ಳೂರು ಬೆಡಗಿಯ ನೋವಿನ ಕತೆ ಇಲ್ಲಿದೆ...Keneeshaa Francis

ಯಾರು ಈ ಕೆನಿಶಾ? 18ನೇ ವಯಸ್ಸಲ್ಲಿ ಮದ್ವೆ, 19ನೇ ವಯಸ್ಸಲ್ಲಿ ಗರ್ಭಪಾತ, ಬೆಂಗ್ಳೂರು ಬೆಡಗಿಯ ನೋವಿನ ಕತೆ ಇಲ್ಲಿದೆ...Keneeshaa Francis
ಯಾರು ಈ ಕೆನಿಶಾ? 18ನೇ ವಯಸ್ಸಲ್ಲಿ ಮದ್ವೆ, 19ನೇ ವಯಸ್ಸಲ್ಲಿ ಗರ್ಭಪಾತ, ಬೆಂಗ್ಳೂರು ಬೆಡಗಿಯ ನೋವಿನ ಕತೆ ಇಲ್ಲಿದೆ...Keneeshaa Francis
Published on

ಪ್ರಮುಖ ಮುಖ್ಯಾಂಶಗಳು

  • ನಟ ರವಿ ಮೋಹನ್​ ಅವರ ವೈವಾಹಿಕ ಬದುಕಿನ ಬಿರುಗಾಳಿಗೆ ಕಾರಣರಾದರೇ ಕೆನಿಶಾ ಫ್ರಾನ್ಸಿಸ್?
  • ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ ಗಾಯಕಿ ಕೆನಿಶಾ ಫ್ರಾನ್ಸಿಸ್​ ಹೆಸರು
  • ಕೇವಲ 18ನೇ ವಯಸ್ಸಿಗೆ ಮದುವೆಯಾಗಿ, 19ರ ಹರೆಯದಲ್ಲೇ ಗರ್ಭಪಾತದ ಭೀಕರ ನೋವನ್ನು ಅನುಭವಿಸಿದ ಕೆನಿಶಾ
  • ಕೆನಿಶಾ ಬದುಕಿಗೆ ತಮಿಳು ನಟ ಜಯಂ ರವಿ ಎಂಟ್ರಿ ಕೊಟ್ಟಿದ್ದೇ ತಡ ಇಡೀ ಚಿತ್ರಣವೇ ಬದಲಾಗಿ ಹೋಗಿದೆ
Keneeshaa Francis : ಕಾಲಿವುಡ್​ ಚಿತ್ರರಂಗದ ಸ್ಟಾರ್ ನಟ ಜಯಂ ರವಿ ಅಲಿಯಾಸ್​ ರವಿ ಮೋಹನ್​ ಅವರ ವೈವಾಹಿಕ ಬದುಕಿನ ಬಿರುಗಾಳಿಗೆ ಕಾರಣರಾದರೇ ಗಾಯಕಿ ಕೆನಿಶಾ ಫ್ರಾನ್ಸಿಸ್? ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಚರ್ಚೆಯಾಗುತ್ತಿದೆ ಕೆನಿಶಾ ಹೆಸರು. ಇದರ ಬೆನ್ನಲ್ಲೇ ಕೆನಿಶಾರ ವೈಯಕ್ತಿಕ ಜೀವನದ ಕರಾಳ ಕಥೆಯೂ ಈಗ ಬಯಲಾಗಿದೆ. ಕೇವಲ 18ನೇ ವಯಸ್ಸಿಗೆ ಮದುವೆಯಾಗಿ, 19ರ ಹರೆಯದಲ್ಲೇ ಗರ್ಭಪಾತದ ಭೀಕರ ನೋವನ್ನು ಅನುಭವಿಸಿದ್ದ ಕೆನಿಶಾ ಬದುಕಿಗೆ ತಮಿಳು ನಟ ಜಯಂ ರವಿ ಎಂಟ್ರಿ ಕೊಟ್ಟಿದ್ದೇ ತಡ, ಇಡೀ ಚಿತ್ರಣವೇ ಬದಲಾಗಿದೆ. ಸದ್ಯ ತಮ್ಮೆಲ್ಲಾ ಕಹಿ ನೆನಪು ಹಾಗೂ ಹಳೆಯ ಬದುಕನ್ನು ಸಂಪೂರ್ಣವಾಗಿ ತೊರೆದು ಹೊಸ ಹಾದಿ ಹಿಡಿದಿರುವ ಕೆನಿಶಾ ಫ್ರಾನ್ಸಿಸ್ ಅವರ ಲೈಫ್ ಸ್ಟೋರಿ ಇಲ್ಲಿದೆ.
ದಕ್ಷಿಣ ಭಾರತದ ಖ್ಯಾತ ನಟ ರವಿ ಮೋಹನ್ ತಮ್ಮ ವೈಯಕ್ತಿಕ ಬದುಕಿನ ಕಾರಣದಿಂದಾಗಿ ದೀರ್ಘಕಾಲದಿಂದ ಸುದ್ದಿಯಲ್ಲಿದ್ದು, ಪತ್ನಿ ಆರತಿ ಜೊತೆಗಿನ ಇವರ ವಿಚ್ಛೇದನ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತನಗೆ ಯಾವುದೇ ಮಾಹಿತಿ ನೀಡದೆ ರವಿ ಸಾಮಾಜಿಕ ಜಾಲತಾಣಗಳಲ್ಲಿ ವಿಚ್ಛೇದನ ಘೋಷಿಸಿದ್ದಾರೆ ಎಂದು ಆರತಿ ಆರೋಪಿಸಿದ್ದಾರೆ. ಇಂದಿಗೂ ಗಂಡ-ಹೆಂಡತಿ ನಡುವೆ ಜಗಳ ಮುಂದುವರಿದೇ ಇದೆ. ಈ ವಿರಹದ ಸುದ್ದಿಗಳ ನಡುವೆಯೇ, ಗಾಯಕಿ ಕೆನಿಶಾ ಫ್ರಾನ್ಸಿಸ್ ಹಾಗೂ ರವಿ ನಡುವೆ ಹೆಚ್ಚುತ್ತಿರುವ ಆಪ್ತತೆ ಮತ್ತು ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ಫೋಟೋ-ವಿಡಿಯೋಗಳು ಭಾರಿ ಟ್ರೋಲಿಂಗ್‌ಗೆ ಕಾರಣವಾಗಿದ್ದಲ್ಲದೆ, ಕೆನಿಶಾರನ್ನು "ಸಂಸಾರ ಒಡೆದವಳು" ಎಂದು ನೆಟ್ಟಿಗರು ಟೀಕಿಸಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ, ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರು ಇನ್‌ಸ್ಟಾಗ್ರಾಮ್‌ನಿಂದ ಬ್ರೇಕ್ ಪಡೆದು ಚೆನ್ನೈ ನಗರವನ್ನೇ ತೊರೆಯುವ ನಿರ್ಧಾರವನ್ನು ಸೋಶಿಯಲ್ ಮೀಡಿಯಾ ಪೋಸ್ಟ್ ಮೂಲಕ ಪ್ರಕಟಿಸಿ ಮತ್ತೆ ಭಾರಿ ಸಂಚಲನ ಮೂಡಿಸಿದ್ದಾರೆ.
ನಟ ರವಿ ಮೋಹನ್ ಜೊತೆಗಿನ ಅಫೇರ್ ವದಂತಿಗಳ ಬೆನ್ನಲ್ಲೇ ಗಾಯಕಿ ಕೆನಿಶಾ ಫ್ರಾನ್ಸಿಸ್ ಸೋಶಿಯಲ್ ಮೀಡಿಯಾದಿಂದ ದೂರ ಸರಿಯುವ ಮತ್ತು ಚೆನ್ನೈ ತೊರೆಯುವ ಮಹತ್ವದ ನಿರ್ಧಾರ ಪ್ರಕಟಿಸಿದ್ದಾರೆ. ತಮ್ಮ ಸುದೀರ್ಘ ಭಾವುಕ ಬರಹದಲ್ಲಿ, "ಪ್ರೀತಿಯಿಂದಲೇ ನಾನು ಈ ಕಥೆಯೊಳಗೆ ಹೆಜ್ಜೆ ಇಟ್ಟಿದ್ದೆ, ಆದರೆ ಈಗ ಮೌನವಾಗಿ ಹೊರನಡೆಯುತ್ತಿದ್ದೇನೆ, ಅಹಂಕಾರ, ಜಡ್ಜ್‌ಮೆಂಟ್ ಹಾಗೂ ಸೃಷ್ಟಿಸಿದ ಸುಳ್ಳು ಕಥೆಗಳಿಂದ ತುಂಬಿರುವ ಜಾಗದಲ್ಲಿ ಒಳ್ಳೆಯತನಕ್ಕೆ ಉಸಿರಾಡಲು ಜಾಗವಿರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಗತ್ತು ಈಗಾಗಲೇ ಯಾರ ಬಗ್ಗೆಯೋ ಒಂದು ಕಥೆಯನ್ನು ಸಿದ್ಧಪಡಿಸಿಟ್ಟುಕೊಂಡಿತ್ತೋ, ಅಂತಹ ಒಬ್ಬ ವ್ಯಕ್ತಿಯನ್ನು ರಕ್ಷಿಸಲು ನಾನು ನನ್ನನ್ನೇ ಅರ್ಪಿಸಿಕೊಂಡಿದ್ದೆ, ಆದರೆ ಈ ಗದ್ದಲದ ಜಗತ್ತಿನಲ್ಲಿ ಸತ್ಯ ಅಥವಾ ದಯೆಗೆ ಯಾವುದೇ ಬೆಲೆಯಿಲ್ಲ ಎಂಬುದು ಈಗ ನನಗೆ ಸ್ಪಷ್ಟವಾಗಿ ಅರ್ಥವಾಗಿದೆ ಎಂದು ಕೆನಿಶಾ ಅತ್ಯಂತ ನೋವಿನಿಂದ ಬರೆದುಕೊಂಡಿದ್ದಾರೆ.
ತಮ್ಮ ಪ್ರಕಟಣೆಯ ಮತ್ತೊಂದು ಭಾಗದಲ್ಲಿ ತೀವ್ರ ಆಕ್ರೋಶ ಹೊರಹಾಕಿರುವ ಕೆನಿಶಾ, "ಸಾರ್ವಜನಿಕರು, ಸಿನಿಮಾ ರಂಗ, ವಿಶ್ಲೇಷಕರು ಹಾಗೂ ಆತನನ್ನು ಪ್ರೀತಿಸುವ, ದ್ವೇಷಿಸುವ, ಸಮರ್ಥಿಸುವ ಅಥವಾ ಆತನ ಬದುಕಿನ ಮೇಲೆ ಹಕ್ಕು ಚಲಾಯಿಸುವ ಪ್ರತಿಯೊಬ್ಬರಿಗೂ ನಾನು ಹೇಳುವುದಿಷ್ಟೇ, ಆತ ಈಗ ಸಂಪೂರ್ಣವಾಗಿ ನಿಮ್ಮವನೇ. ಇನ್ಮುಂದೆ ಯಾವುದೇ ಸ್ಪಷ್ಟೀಕರಣ ಇಲ್ಲ, ಸಮರ್ಥನೆಯೂ ಇಲ್ಲ. ಮೊದಲಿನಿಂದಲೂ ನನಗೇ ಸಂಬಂಧಪಡದ ಯುದ್ಧಗಳನ್ನು ನಾನಿನ್ನು ಹೋರಾಡುವುದಿಲ್ಲ. ಇಂತಹ ಚಿತ್ರರಂಗದ ಜಗತ್ತಿನಲ್ಲಿ ಒಳ್ಳೆಯ ಜನರಿಗೂ ಬದುಕಲು ಒಂದು ಅವಕಾಶ ಬೇಕು ಮತ್ತು ಅವರಿಗೆ ಬೆಂಬಲವಾಗಿ ನಿಲ್ಲುವುದು ಒಳ್ಳೆಯದು ಎಂದು ಯೋಚಿಸಿದ ನಾನು ನಿಜಕ್ಕೂ ಮೂರ್ಖಳು. ಆದರೆ, ಈ ಜಾಗ ಕೇವಲ ಸುಳ್ಳುಗಾರರು, ವಂಚಕರು, ಕುತಂತ್ರಿಗಳು ಹಾಗೂ ಪರರ ಬದುಕನ್ನು ದೋಚುವವರಿಗಷ್ಟೇ ಲಾಯಕ್ಕು ಎಂಬುದು ನನಗೆ ಅರ್ಥವಾಗಿದೆ. ಅದಕ್ಕಾಗಿಯೇ ನಾನು ಆತನನ್ನು ಶಾಂತಿ, ಪ್ರೀತಿ ಮತ್ತು ಸಂಪೂರ್ಣ ವೈರಾಗ್ಯದೊಂದಿಗೆ ಮುಕ್ತಗೊಳಿಸುತ್ತಿದ್ದೇನೆ. ಜೊತೆಗೆ ನಾನು ವಹಿಸಿಕೊಂಡಿದ್ದ ಎಲ್ಲಾ ಜವಾಬ್ದಾರಿಗಳಿಂದಲೂ ದೂರ ಸರಿಯುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಜನರು ತಮ್ಮ ಒಳ್ಳೆಯತನ ಹಾಗೂ ಭಾವುಕತೆಯನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಕ್ಕೆ ತೀವ್ರ ನಿರಾಶೆ ವ್ಯಕ್ತಪಡಿಸಿರುವ ಕೆನಿಶಾ ಅವರು, ನಿಜವಾದ ಪ್ರೀತಿ, ನಿಷ್ಠೆ ಹಾಗೂ ಮೃದುತ್ವದ ಶಕ್ತಿ ಏನೆಂಬುದನ್ನು ತೋರಿಸಲು ಈ ಜಗತ್ತು ನನಗೆ ಅವಕಾಶ ನೀಡಬೇಕಿತ್ತು ಎಂದು ನಾನು ಬಯಸುತ್ತೇನೆ. ಆದರೆ ಇಂದಿನ ಪೀಳಿಗೆಗೆ ಮೃದುತ್ವದ ಮೇಲೆ ನಂಬಿಕೆಯಿದ್ದಂತಿಲ್ಲ, ಅವರಿಗೆ ಭಕ್ತಿಗಿಂತ ವಿನಾಶವನ್ನು ಅರಗಿಸಿಕೊಳ್ಳುವುದೇ ಸುಲಭವಾಗಿದೆ. ತ್ಯಾಗದಿಂದ ಕೂಡಿದ ಸತ್ಯಗಳಿಗಿಂತ, ಭಾವನೆಗಳ ಆಧಾರದ ಮೇಲೆ ಸೃಷ್ಟಿಸಿದ ಕಟ್ಟುಕಥೆಗಳನ್ನೇ ಜನರು ಯಾವಾಗಲೂ ಆಯ್ಕೆ ಮಾಡುತ್ತಾರೆ. ಕೊನೆಗೂ ನೀವೆಲ್ಲ ಅಂದುಕೊಂಡಿದ್ದೇ ಆಯಿತು, ನಿಮಗೆ ಬೇಕಾಗಿದ್ದು ಸಿಕ್ಕಿತು. ಹಾಗಾಗಿ ಇಂದಿನಿಂದ ನಾನು ಇದನ್ನು ವಿರೋಧಿಸುವುದನ್ನು ನಿಲ್ಲಿಸುತ್ತಿದ್ದೇನೆ. ತಪ್ಪಾಗಿ ಅರ್ಥೈಸಿಕೊಳ್ಳುವುದಕ್ಕೇ ಹಠ ಹಿಡಿದಿರುವವರ ಮುಂದೆ ನನ್ನ ಒಳ್ಳೆಯತನವನ್ನು ಸಾಬೀತುಪಡಿಸಲು ನಾನು ಇನ್ಮುಂದೆ ಪ್ರಯತ್ನಿಸುವುದಿಲ್ಲ. ನಾನು ಚೆನ್ನೈ ತೊರೆದಿದ್ದೇನೆ, ನಾನು ಸೋಲೊಪ್ಪಿಕೊಂಡಿದ್ದೇನೆ. ನನ್ನ ಸಂಗೀತ, ನನ್ನ ಥೆರಪಿ ಹಾಗೂ ಇದುವರೆಗಿನ ನನ್ನ ಬದುಕಿಗೆ ಸಂಬಂಧಿಸಿದ ಪ್ರತಿಯೊಂದನ್ನೂ ನಾನು ಕೈಬಿಡುತ್ತಿದ್ದೇನೆ. ದೇವರು ಸೃಷ್ಟಿಸಿದ್ದನ್ನು ಮನುಷ್ಯ ಮುರಿದು ಹಾಕಬಲ್ಲ ಎಂಬುದಕ್ಕೆ ಇದೇ ಸಾಕ್ಷಿ ಎಂದು ಅತ್ಯಂತ ವೇದನೆಯಿಂದ ಕೆನಿಶಾ ನುಡಿದಿದ್ದಾರೆ.

ಯಾರು ಈ ಕೆನಿಶಾ?

ಮೂಲತಃ ಬೆಂಗಳೂರಿನವರಾದ ಕೆನಿಶಾ ಫ್ರಾನ್ಸಿಸ್ ಅವರು ವೃತ್ತಿಪರ ಗಾಯಕಿ, ಸಂಗೀತ ನಿರ್ಮಾಪಕಿ ಹಾಗೂ ಅಧ್ಯಾತ್ಮಿಕ ಚಿಕಿತ್ಸಕಿ (ಸ್ಪಿರಿಚುಯಲ್ ಥೆರಪಿಸ್ಟ್) ಆಗಿದ್ದಾರೆ. 'ದಿ ಸ್ಟೇಜ್' (The Stage) ಎಂಬ ಜನಪ್ರಿಯ ಸಂಗೀತ ರಿಯಾಲಿಟಿ ಶೋನಲ್ಲಿ ಫೈನಲಿಸ್ಟ್ ಆಗುವ ಮೂಲಕ ಇವರು ಮೊದಲ ಬಾರಿಗೆ ದೇಶಾದ್ಯಂತ ಬೆಳಕಿಗೆ ಬಂದರು. ತದನಂತರ ಗೋವಾ ಮತ್ತು ಬೆಂಗಳೂರಿನ ಪ್ರಮುಖ ಮ್ಯೂಸಿಕ್ ಸರ್ಕ್ಯೂಟ್‌ಗಳಲ್ಲಿ ಲೈವ್ ಪರ್ಫಾರ್ಮರ್ ಆಗಿ ತಮ್ಮದೇ ಆದ ವೃತ್ತಿಜೀವನವನ್ನು ರೂಪಿಸಿಕೊಂಡರು. ಅಂದಹಾಗೆ, ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರ ವೈಯಕ್ತಿಕ ಜೀವನವು ಅತ್ಯಂತ ಕಠಿಣ ಮತ್ತು ಆಘಾತಕಾರಿ ಸವಾಲುಗಳಿಂದ ತುಂಬಿದೆ. 2013ರಲ್ಲಿ ತಾಯಿಯನ್ನು ಕಳೆದುಕೊಂಡ ಅವರು, ಕೆಲವೇ ವರ್ಷಗಳ ನಂತರ ತಂದೆಯನ್ನೂ ಕಳೆದುಕೊಂಡರು. ತಂದೆಯ ಕೊನೆಯ ದಿನಗಳಲ್ಲಿ ಅವರೊಬ್ಬರೇ ನಿಂತು ಆರೈಕೆ ಮಾಡಿದ್ದರು. ಕೌಟುಂಬಿಕವಾಗಿ ಪುರುಷರಿಂದ ದೌರ್ಜನ್ಯಕ್ಕೊಳಗಾಗಿದ್ದ ಕೆನಿಶಾ, ಬಾಲ್ಯದಲ್ಲಿ ಚರ್ಚ್‌ಗಳಲ್ಲಿ ಹಾಡಲು ಪ್ರಾರಂಭಿಸಿ, ನಂತರದ ದಿನಗಳಲ್ಲಿ ಕಾಫಿ ಶಾಪ್‌ಗಳಲ್ಲಿ ದಿನಕ್ಕೆ 500 ರೂಪಾಯಿ ದುಡಿಯುತ್ತಾ ಸಣ್ಣ ವಯಸ್ಸಿನಲ್ಲೇ ಗಾಯನದಲ್ಲಿ ಹೆಸರು ಮಾಡಿದರು ಹಾಗೂ 'ದಿ ಸ್ಟೇಜ್' ಶೋ ಮೂಲಕ ಪ್ರಸಿದ್ಧಿ ಪಡೆದರು. ಕೇವಲ 18ನೇ ವಯಸ್ಸಿಗೆ ಮದುವೆಯಾಗಿದ್ದ ಇವರು, 19ರ ಹರೆಯದಲ್ಲೇ ಗರ್ಭಪಾತದ ಭೀಕರ ನೋವು ಅನುಭವಿಸಿದರು. ಪತಿ ದೈಹಿಕವಾಗಿ ಹಲ್ಲೆ ನಡೆಸುತ್ತಿದ್ದ, ಪರಸ್ತ್ರೀ ಸಂಬಂಧ ಹೊಂದಿದ್ದ ಹಾಗೂ ಮಾನಸಿಕವಾಗಿ ಹಿಂಸಿಸುತ್ತಿದ್ದ ಕಾರಣ ಆ ವಿಷಕಾರಿ ಸಂಬಂಧದಿಂದ ಹೊರಬಂದು ಅಂದಿನಿಂದ ಒಂಟಿಯಾಗಿ ಜೀವಿಸುತ್ತಿದ್ದಾರೆ. ಯಾವಾಗ ನಟ ಜಯಂ ರವಿ ಜತೆ ಕೆನಿಶಾ ಹೆಸರು ಕೇಳಿಬಂತೋ ಅಂದಿನಿಂದ ಕೆನಿಶಾ ಅವರು ವಿವಾದದ ಕೇಂದ್ರ ಬಿಂದುವಾಗಿದ್ದಾರೆ.
ನಟ ಜಯಂ ರವಿ ಜೊತೆಗಿನ ಒಡನಾಟದ ಬಗ್ಗೆ ಸ್ಪಷ್ಟನೆ ನೀಡಿರುವ ಕೆನಿಶಾ, ತಾವು ಮೊದಲ ಬಾರಿಗೆ ಆಡಿಯೋ ಲಾಂಚ್ ಒಂದರಲ್ಲಿ ಭೇಟಿಯಾಗಿದ್ದಾಗಿ ಮತ್ತು ನಂತರ ರವಿ ಅವರು ಚಿಕಿತ್ಸೆಗಾಗಿ ತಮ್ಮ ಬಳಿಗೆ ಪೇಷೆಂಟ್ ಆಗಿ ಬಂದಾಗ ಉಂಟಾದ ಸ್ನೇಹವಿದು ಎಂದು ತಿಳಿಸಿದ್ದಾರೆ. ರವಿ ಸಂಕಷ್ಟದಲ್ಲಿದ್ದಾಗ ತಾನು ಸ್ನೇಹಿತೆಯಾಗಿ ಜೊತೆಗಿದ್ದೆ ಎಂದಿರುವ ಅವರು, ತಮ್ಮ ವಿರುದ್ಧ ಬೆಂಗಳೂರಿಗೆ ಡಿಟೆಕ್ಟಿವ್‌ಗಳನ್ನು ಕಳುಹಿಸಿ ತನಿಖೆ ಮಾಡಿಸಲಾಗಿದೆ ಹಾಗೂ ಸೋಶಿಯಲ್ ಮೀಡಿಯಾ ಅಕೌಂಟ್‌ಗಳನ್ನು ಹ್ಯಾಕ್ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಜೊತೆಗೆ, ಜಯಂ ರವಿಗೆ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ, ತಂದೆಯನ್ನು ವೃದ್ಧಾಶ್ರಮಕ್ಕೆ ಸೇರಿಸಿದ್ದಾರೆ ಎಂಬಿತ್ಯಾದಿ ಸುಳ್ಳು ವದಂತಿಗಳನ್ನು ಹರಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿರುವ ಕೆನಿಶಾ, "ಗರ್ಭದಲ್ಲೇ ಮಗುವನ್ನು ಕಳೆದುಕೊಂಡಿರುವ ನಾನು, ಮತ್ತೊಬ್ಬ ವ್ಯಕ್ತಿಯನ್ನು ಆತನ ಮಕ್ಕಳಿಂದ ದೂರ ಮಾಡಲು ಸಾಧ್ಯವೇ? ಎಂದು ಪ್ರಶ್ನಿಸಿದ್ದಾರೆ. ತಮ್ಮ 34 ವರ್ಷದ ಜೀವನದಲ್ಲಿ ಕಳೆದ ಒಂದು ವರ್ಷದಿಂದ ನೆಮ್ಮದಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿರುವ ಅವರು, ಸದ್ಯ ಸಂಗೀತ, ಥೆರಪಿ, ಸೋಶಿಯಲ್ ಮೀಡಿಯಾ ಹಾಗೂ ಜಯಂ ರವಿ ಸೇರಿದಂತೆ ಎಲ್ಲರನ್ನೂ ಮತ್ತು ಎಲ್ಲವನ್ನೂ ತೊರೆದು ದೂರ ಸರಿಯುತ್ತಿರುವುದಾಗಿ ಪ್ರಕಟಿಸಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net