ಏನಿದು ಜಿಹಾದಿ ಡ್ರಗ್? ಭಾರತದಲ್ಲಿ ಮೊದಲ ಬಾರಿ ಸೀಜ್ ಆದ ಮಾದಕ ವಸ್ತು ಹಿಂದಿರೋ ಭಯಾನಕ ಸತ್ಯ ಇಲ್ಲಿದೆ... Jihadi Drug

ಏನಿದು ಜಿಹಾದಿ ಡ್ರಗ್? ಭಾರತದಲ್ಲಿ ಮೊದಲ ಬಾರಿ ಸೀಜ್ ಆದ ಮಾದಕ ವಸ್ತು  ಹಿಂದಿರೋ ಭಯಾನಕ ಸತ್ಯ ಇಲ್ಲಿದೆ... Jihadi Drug
ಏನಿದು ಜಿಹಾದಿ ಡ್ರಗ್? ಭಾರತದಲ್ಲಿ ಮೊದಲ ಬಾರಿ ಸೀಜ್ ಆದ ಮಾದಕ ವಸ್ತು ಹಿಂದಿರೋ ಭಯಾನಕ ಸತ್ಯ ಇಲ್ಲಿದೆ... Jihadi Drug
Published on

ಪ್ರಮುಖ ಮುಖ್ಯಾಂಶಗಳು

  • ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂಪಾಯಿ ಮೌಲ್ಯದ ಭಯಾನಕ 'ಜಿಹಾದಿ ಡ್ರಗ್' ವಶಕ್ಕೆ
  • ನಾರ್ಕೋಟಿಕ್ಸ್ ಕಂಟ್ರೋಲ್​ ಬ್ಯೂರೋ ನಡೆಸಿದ 'ಆಪರೇಷನ್ ರೇಜ್‌ಪಿಲ್' ಕಾರ್ಯಾಚರಣೆಯಲ್ಲಿ ಸೆರೆಸಿಕ್ಕ ಮಾದಕ ವಸ್ತು
  • ಮಧ್ಯಪ್ರಾಚ್ಯಕ್ಕೆ ಸಾಗಿಸಲು ಸಂಚು ರೂಪಿಸಲಾಗಿದ್ದ 227.7 ಕೆಜಿ ತೂಕದ ಈ ಡ್ರಗ್ಸ್ ಜಾಲವನ್ನು ಭೇದಿಸಿದ ಅಧಿಕಾರಿಗಳು
  • ಪ್ರತಿಯೊಂದು ಗ್ರಾಂ ಡ್ರಗ್ಸ್ ಮೇಲೂ ಕಠಿಣ ನಿಗಾ ಇಟ್ಟು ದಂಧೆಯನ್ನು ಸಂಪೂರ್ಣ ಮಟ್ಟ ಹಾಕುತ್ತೇವೆ ಎಂದ ಗೃಹ ಸಚಿವರು
ನವದೆಹಲಿ: ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭಾರಿ ಪ್ರಮಾಣದ ‘ಜಿಹಾದಿ ಡ್ರಗ್’ ( Jihadi Drug ) ಎಂದೇ ಕುಖ್ಯಾತಿ ಪಡೆದಿರುವ ‘ಕ್ಯಾಪ್ಟಾಗನ್’ (Captagon) ಮಾದಕ ವಸ್ತುವನ್ನು ಕೇಂದ್ರ ಗೃಹ ಸಚಿವಾಲಯ ಇತ್ತೀಚೆಗಷ್ಟೇ ಜಪ್ತಿ ಮಾಡಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶನಿವಾರ ಈ ಮಹತ್ವದ ಕಾರ್ಯಾಚರಣೆಯನ್ನು ಪ್ರಕಟಿಸಿದ್ದು, ಅಮಲೇರಿಸುವ ದಂಧೆಯ ವಿರುದ್ಧ ನಡೆಸಲಾದ ಈ ಬೃಹತ್ ಆ್ಯಂಟಿ-ನಾರ್ಕೋಟಿಕ್ಸ್ ‘ಆಪರೇಷನ್ ರೇಜ್‌ಪಿಲ್’ (Operation Ragepill) ಮೂಲಕ ಬರೋಬ್ಬರಿ 182 ಕೋಟಿ ರೂಪಾಯಿ ಮೌಲ್ಯದ ಭಯಾನಕ ಜಿಹಾದಿ ಡ್ರಗ್ಸ್ ಜಾಲವನ್ನು ಬೇರುಸಹಿತ ಕಿತ್ತೆಸೆಯಲಾಗಿದೆ.
ಮಾದಕ ವಸ್ತುಗಳ ಅಂತಾರರಾಷ್ಟ್ರೀಯ ಜಾಲದ ವಿರುದ್ಧ ಕೇಂದ್ರ ಸರ್ಕಾರ ನಡೆಸುತ್ತಿರುವ ಹೋರಾಟಕ್ಕೆ ಈ ಕಾರ್ಯಾಚರಣೆ ದೊಡ್ಡ ಯಶಸ್ಸು ತಂದುಕೊಟ್ಟಿದೆ ಎಂದು ಗೃಹ ಸಚಿವ ಅಮಿತ್ ಷಾ ಅವರು ತಮ್ಮ ಎಕ್ಸ್​ ( ಈ ಹಿಂದೆ ಟ್ವಿಟರ್) ಪೋಸ್ಟ್‌ನಲ್ಲಿ ಹೆಮ್ಮೆಯಿಂದ ಹಂಚಿಕೊಂಡಿದ್ದಾರೆ.
ಮೋದಿ ಸರ್ಕಾರವು 'ಮಾದಕ ಮುಕ್ತ ಭಾರತ' ನಿರ್ಮಾಣಕ್ಕೆ ಬದ್ಧವಾಗಿದೆ. ನಮ್ಮ ತನಿಖಾ ಸಂಸ್ಥೆಗಳು ನಡೆಸಿದ 'ಆಪರೇಷನ್ ರೇಜ್‌ಪಿಲ್' ಮೂಲಕ ದೇಶದಲ್ಲೇ ಮೊದಲ ಬಾರಿಗೆ 182 ಕೋಟಿ ರೂಪಾಯಿ ಮೌಲ್ಯದ ಭೀಕರ 'ಜಿಹಾದಿ ಡ್ರಗ್' ಎಂದೇ ಕರೆಯಲ್ಪಡುವ ಕ್ಯಾಪ್ಟಾಗನ್ ಅನ್ನು ಜಪ್ತಿ ಮಾಡಿ ಮಹತ್ತರ ಸಾಧನೆ ಮಾಡಿವೆ ಎಂದು ತಿಳಿಸಲು ನನಗೆ ಸಂತೋಷವಾಗುತ್ತಿದೆ ಎಂದು ಅಮಿತ್ ಷಾ ಅವರು ಬರೆದುಕೊಂಡಿದ್ದಾರೆ.
ಈ ಬೃಹತ್ ಕಾರ್ಯಾಚರಣೆಯ ವೇಳೆ ಭದ್ರತಾ ಸಂಸ್ಥೆಗಳು ಬರೋಬ್ಬರಿ 227.7 ಕೆಜಿ ತೂಕದ ಕ್ಯಾಪ್ಟಾಗನ್ ಮಾತ್ರೆಗಳು ಹಾಗೂ ಪೌಡರ್ ಅನ್ನು ವಶಪಡಿಸಿಕೊಂಡಿದ್ದು, ಅಂತಾರಾಷ್ಟ್ರೀಯ ಮಾದಕ ವಸ್ತು ಸಾಗಣೆ ಜಾಲಕ್ಕೆ ಲಿಂಕ್ ಹೊಂದಿದ್ದ ಸಿರಿಯಾ ಮೂಲದ ವಿದೇಶಿ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗೃಹ ಸಚಿವ ಅಮಿತ್ ಷಾ ಅವರ ಪ್ರಕಾರ, ಜಪ್ತಿ ಮಾಡಲಾದ ಈ ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಅನ್ನು ಮಧ್ಯಪ್ರಾಚ್ಯ (ಮಿಡಲ್ ಈಸ್ಟ್) ದೇಶಗಳಿಗೆ ಸಾಗಿಸಲು ಸಂಚು ರೂಪಿಸಲಾಗಿತ್ತು. ಮಧ್ಯಪ್ರಾಚ್ಯಕ್ಕೆ ಸಾಗಿಸಬೇಕಿದ್ದ ಡ್ರಗ್ಸ್ ಜಾಲವನ್ನು ಭೇದಿಸಿರುವುದು ಮತ್ತು ವಿದೇಶಿ ಪ್ರಜೆಯನ್ನು ಬಂಧಿಸಿರುವುದು ಮಾದಕ ವಸ್ತುಗಳ ವಿರುದ್ಧ ನಮ್ಮ ಸರ್ಕಾರ ಹೊಂದಿರುವ 'ಝೀರೋ ಟಾಲರೆನ್ಸ್' (ಶೂನ್ಯ ಸಹಿಷ್ಣುತೆ) ನೀತಿಗೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಷಾ ಹೇಳಿದ್ದಾರೆ.
ಇದೇ ವೇಳೆ, ಭಾರತವನ್ನು ಕೇವಲ ಟ್ರಾನ್ಸಿಟ್ ಪಾಯಿಂಟ್ (ಮಾರ್ಗ) ಆಗಿ ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಡ್ರಗ್ಸ್ ಸಾಗಿಸುವವರ ವಿರುದ್ಧ ಕಠಿಣ ಎಚ್ಚರಿಕೆ ನೀಡಿರುವ ಅಮಿತ್ ಷಾ, "ನಮ್ಮ ದೇಶದ ಭೂಪ್ರದೇಶವನ್ನು ಬಳಸಿಕೊಂಡು ಭಾರತದೊಳಗೆ ಪ್ರವೇಶಿಸುವ ಅಥವಾ ಇಲ್ಲಿಂದ ಹೊರಹೋಗುವ ಪ್ರತಿಯೊಂದು ಗ್ರಾಂ ಮಾದಕ ವಸ್ತುವಿನ ಮೇಲೂ ನಾವು ಕಠಿಣ ನಿಗಾ ಇಡಲಿದ್ದೇವೆ ಮತ್ತು ಇಂತಹ ದಂಧೆಯನ್ನು ಸಂಪೂರ್ಣವಾಗಿ ಮಟ್ಟ ಹಾಕಲಿದ್ದೇವೆ. ಈ ದಿಟ್ಟ ಕಾರ್ಯಾಚರಣೆ ನಡೆಸಿದ ಎನ್‌ಸಿಬಿ (NCB) ಅಧಿಕಾರಿಗಳ ಜಾಗರೂಕತೆ ಹಾಗೂ ಶೌರ್ಯಕ್ಕೆ ನನ್ನ ಸಲಾಂ ಎಂದು ಶ್ಲಾಘಿಸಿದ್ದಾರೆ.

ಏನಿದು ಕ್ಯಾಪ್ಟಾಗನ್?

ಕ್ಯಾಪ್ಟಾಗನ್ ಎಂಬುದು ಮೂಲತಃ 'ಫೆನೆಥೈಲಿನ್' ಎಂಬ ಸಿಂಥೆಟಿಕ್ ಸ್ಟಿಮ್ಯುಲಂಟ್‌ನ ಬೀದಿ ಹೆಸರಾಗಿದೆ. ಇದನ್ನು ಆರಂಭದಲ್ಲಿ 1960ರ ದಶಕದಲ್ಲಿ ಮಕ್ಕಳಲ್ಲಿನ ಗಮನದ ಕೊರತೆಯ ಅಸ್ವಸ್ಥತೆ ಮತ್ತು ಅತಿಯಾದ ನಿದ್ರೆಯ ಸಮಸ್ಯೆಯಾದ 'ನಾರ್ಕೊಲೆಪ್ಸಿ' ನಿವಾರಣೆಗೆ ಚಿಕಿತ್ಸೆ ನೀಡಲು ಅಭಿವೃದ್ಧಿಪಡಿಸಲಾಗಿತ್ತು. ಆದರೆ, ಈ ಮಾದಕ ವಸ್ತುವು ಮನುಷ್ಯನನ್ನು ತೀವ್ರವಾಗಿ ವ್ಯಸನಕ್ಕೆ ತಳ್ಳುವ ಗುಣ ಹೊಂದಿದ್ದರಿಂದ, ನಂತರದ ದಿನಗಳಲ್ಲಿ ಇದನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು.
ಪ್ರಸ್ತುತ ಕಾಳಸಂತೆಯಲ್ಲಿ ಚಲಾವಣೆಯಲ್ಲಿರುವ ಕಾನೂನುಬಾಹಿರ ಕ್ಯಾಪ್ಟಾಗನ್ ಮಾತ್ರೆಗಳು ಆಂಫೆಟಮೈನ್, ಕೆಫೀನ್, ಮೆಥಾಂಫೆಟಮೈನ್ ಮತ್ತು ಇತರ ಪ್ರಬಲ ಉತ್ತೇಜಕಗಳನ್ನು ಒಳಗೊಂಡಿರುತ್ತವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾದಕ ವಸ್ತುವನ್ನು ಸೇವಿಸುವುದರಿಂದ ಮನುಷ್ಯನಲ್ಲಿ ಜಾಗರೂಕತೆ ಹೆಚ್ಚುತ್ತದೆ, ಆಯಾಸ ಕಡಿಮೆಯಾಗುತ್ತದೆ ಮತ್ತು ದೀರ್ಘಕಾಲದವರೆಗೆ ನಿದ್ರೆ ಬಾರದಂತೆ ಎಚ್ಚರವಾಗಿರಬಹುದು. ಇದೇ ಕಾರಣಗಳಿಗಾಗಿ ಪಶ್ಚಿಮ ಏಷ್ಯಾ ಮತ್ತು ಮಧ್ಯಪ್ರಾಚ್ಯದ (ಮಿಡಲ್ ಈಸ್ಟ್) ಕೆಲವು ಭಾಗಗಳಲ್ಲಿ ಈ ಅಪಾಯಕಾರಿ ಡ್ರಗ್ಸ್ ಅನ್ನು ವ್ಯಾಪಕವಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.

ಜಿಹಾದಿ ಡ್ರಗ್​ ಎಂದು ಏಕೆ ಕರೆಯುತ್ತಾರೆ?

ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಗಳು ಈ ಮಾದಕ ವಸ್ತುವಿನ ಸಾಗಣೆ ಮತ್ತು ಬಳಕೆಯನ್ನು ಪಶ್ಚಿಮ ಏಷ್ಯಾದ ಉಗ್ರಗಾಮಿ ಸಂಘಟನೆಗಳು ಹಾಗೂ ಸಂಘರ್ಷ ಪೀಡಿತ ಪ್ರದೇಶಗಳ ನೆಟ್‌ವರ್ಕ್‌ಗಳೊಂದಿಗೆ ಲಿಂಕ್ ಮಾಡಿರುವುದರಿಂದ, ಕ್ಯಾಪ್ಟಾಗನ್ ಅನ್ನು ಹೆಚ್ಚಾಗಿ "ಜಿಹಾದಿ ಡ್ರಗ್" ಎಂದು ಕರೆಯಲಾಗುತ್ತದೆ. ಇದರ ಉತ್ಪಾದನಾ ವೆಚ್ಚ ಅತ್ಯಂತ ಕಡಿಮೆ ಇರುವುದು ಮತ್ತು ಮಾರುಕಟ್ಟೆಯಲ್ಲಿ ಇದಕ್ಕೆ ಇರುವ ಭಾರಿ ಬೇಡಿಕೆಯಿಂದಾಗಿ, ಇದು ಸಂಘಟಿತ ಅಪರಾಧ ಗ್ಯಾಂಗ್‌ಗಳು ಹಾಗೂ ಉಗ್ರಗಾಮಿಗಳೊಂದಿಗೆ ನಂಟು ಹೊಂದಿರುವ ಜಾಲಗಳಿಗೆ ಅಕ್ರಮ ಹಣಕಾಸು ಒದಗಿಸುವ ಪ್ರಮುಖ ಮೂಲವಾಗಿ ಮಾರ್ಪಟ್ಟಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಾದಕ ವಸ್ತು ಜಾಲದ ವಿರುದ್ಧ ಕೇಂದ್ರ ಸರ್ಕಾರ ದೇಶಾದ್ಯಂತ ನಡೆಸುತ್ತಿರುವ ಬೃಹತ್ ಕಾರ್ಯಾಚರಣೆಯ ಭಾಗವಾಗಿಯೇ ಈ ಇತ್ತೀಚಿನ ಜಪ್ತಿ ನಡೆದಿದೆ. ಇದಕ್ಕೂ ಮುನ್ನ, ಇದೇ ವರ್ಷದ ಆರಂಭದಲ್ಲಿ ಭಾರತ ಮತ್ತು ಟರ್ಕಿ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಹಾಗೂ ಡ್ರಗ್ ದಂಧೆಯ ಪ್ರಮುಖ ಸೂತ್ರಧಾರ ಮೊಹಮ್ಮದ್ ಸಲೀಂ ಡೋಲಾನನ್ನು ಯಶಸ್ವಿಯಾಗಿ ಭಾರತಕ್ಕೆ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net