ದಾಂಪತ್ಯ ಜೀವನಕ್ಕೆ ಗುಡ್‌ಬೈ ಹೇಳಿದ ಹನ್ಸಿಕಾ ಮೋಟ್ವಾನಿ: ಯಾವುದೇ ಜೀವನಾಂಶ ಬೇಡ ಎಂದ ಸೌತ್​ ಬ್ಯೂಟಿ! Hansika Motwani Divorce

ನಟಿ ಹನ್ಸಿಕಾ ಮೋಟ್ವಾನಿ  ಮತ್ತು ಉದ್ಯಮಿ ಸೊಹೇಲ್ ಖತುರಿಯಾ
ನಟಿ ಹನ್ಸಿಕಾ ಮೋಟ್ವಾನಿ ಮತ್ತು ಉದ್ಯಮಿ ಸೊಹೇಲ್ ಖತುರಿಯಾ
Published on

ಪ್ರಮುಖ ಮುಖ್ಯಾಂಶಗಳು

  • ನಟಿ ಹನ್ಸಿಕಾ ಮೋಟ್ವಾನಿ ವಿಚ್ಛೇಧನ
  • ಉದ್ಯಮಿ ಸೊಹೇಲ್ ಖತುರಿಯಾರಿಂದ ಡಿವೋರ್ಸ್​ ಪಡೆದ ನಟಿ
  • ಯಾವುದೇ ಜೀವನಾಂಶವನ್ನು ಕೇಳದೆ ವಿಚ್ಛೇಧನ ಪಡೆದ ಸೌತ್​ ಬ್ಯೂಟಿ
ಮುಂಬೈ: ಇತ್ತೀಚೆಗೆ ಭಾರತದಲ್ಲಿ ಮದುವೆಗಿಂತ ವಿಚ್ಛೇಧನದ ಸುದ್ದಿಗಳೇ ಸಖತ್​ ಸುದ್ದಿ ಮಾಡುತ್ತಿದ್ದು, ಈಗ ಈ ಪಟ್ಟಿಗೆ ಸೌತ್ ಸಿನಿಮಾ ಮತ್ತು ಬಾಲಿವುಡ್‌ನ ಜನಪ್ರಿಯ ನಟಿ ಹನ್ಸಿಕಾ ಮೋಟ್ವಾನಿ (Hansika Motwani Divorce) ಹೆಸರು ಸೇರಿದೆ.
ಕಳೆದ ನಾಲ್ಕು ವರ್ಷದಿಂದ ಈ ಕುರಿತು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿದ್ದ ಹನ್ಸಿಕಾ ಮತ್ತು ಉದ್ಯಮಿ ಸೊಹೇಲ್ ಖತುರಿಯಾ ಅವರಿಗೆ ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಕಳೆದ ಕೆಲವು ತಿಂಗಳುಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ಇದೀಗ ತೆರೆ ಬಿದ್ದಿದ್ದು, ನಟಿ ಹನ್ಸಿಕಾ ಅವರ ವಕೀಲರಾದ ಅದ್ನಾನ್ ಶೇಖ್ ಈ ವಿಷಯವನ್ನು ದೃಢಪಡಿಸಿದ್ದಾರೆ.

ಪರಸ್ಪರ ಒಪ್ಪಿಗೆಯ ವಿಚ್ಛೇದನ

ಬಾಂದ್ರಾದ ಕುಟುಂಬ ನ್ಯಾಯಾಲಯವು ವಿಚ್ಛೇದನದ ತೀರ್ಪು ನೀಡಿದೆ. ಮದುವೆಯ ಬಾಂಧವ್ಯ ಸರಿಪಡಿಸಲಾಗದಷ್ಟು ಮುರಿದುಬಿದ್ದಿದೆ ಎಂದು ಇಬ್ಬರೂ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಪರಸ್ಪರ ಒಪ್ಪಿಗೆಯ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ, ಎಂದು ನಟಿ ಹನ್ಸಿಕಾ ಅವರ ವಕೀಲರು ತಿಳಿಸಿದ್ದಾರೆ.
ಜೀವನಾಂಶ ಬೇಡ ಎಂದ ನಟಿ!
ಈ ವಿಚ್ಛೇದನದ ವಿಶೇಷವೆಂದರೆ, ಹನ್ಸಿಕಾ ಯಾವುದೇ ರೀತಿಯ ಜೀವನಾಂಶವನ್ನು (Alimony) ಕೇಳಿಲ್ಲ. ಈ ಬಗ್ಗೆ ವಕೀಲರು ಸ್ಪಷ್ಟನೆ ನೀಡುತ್ತಾ, ನಮ್ಮ ಕಕ್ಷಿದಾರರು ಯಾವುದೇ ಹಣಕಾಸಿನ ಹಕ್ಕುಗಳನ್ನು ಅಥವಾ ಜೀವನಾಂಶವನ್ನು ಕೇಳಿಲ್ಲ. ಅವರ ಏಕೈಕ ಉದ್ದೇಶ ಗೌರವಯುತವಾಗಿ ಮತ್ತು ಶಾಂತಿಯುತವಾಗಿ ಈ ಸಂಬಂಧವನ್ನು ಮುಕ್ತಾಯಗೊಳಿಸುವುದಾಗಿತ್ತು. ಅವರು ಈಗ ತಮ್ಮ ವೈಯಕ್ತಿಕ ಜೀವನ ಮತ್ತು ಸಿನಿಮಾಗಳತ್ತ ಗಮನಹರಿಸಲು ಬಯಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಐಫೆಲ್ ಟವರ್ ಮುಂದೆ ಪ್ರಪೋಸ್​; ಈಗ ಡಿವೋರ್ಸ್​

ಹನ್ಸಿಕಾ ಮತ್ತು ಸೊಹೇಲ್ ಅವರ ಮದುವೆ ಅದ್ದೂರಿಯಾಗಿ ನಡೆದಿತ್ತು. ಡಿಸೆಂಬರ್ 2022ರಲ್ಲಿ ಜೈಪುರದ ಸುಂದರ ಮುಂಡೋಟಾ ಫೋರ್ಟ್‌ನಲ್ಲಿ ಇವರ ಮದುವೆ ಸಂಭ್ರಮದಿಂದ ಜರುಗಿತ್ತು. ಅದಕ್ಕೂ ಮುನ್ನ, ಪ್ಯಾರಿಸ್‌ನ ಐಫೆಲ್ ಟವರ್ ಎದುರು ಸೊಹೇಲ್ ಅವರು ಹನ್ಸಿಕಾಗೆ ಪ್ರಪೋಸ್ ಮಾಡಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದವು. ಹನ್ಸಿಕಾ ಕೂಡ ಈಗ ಮತ್ತು ಎಂದೆಂದಿಗೂ ಎಂದು ಹೇಳುತ್ತಾ ತಮ್ಮ ಪ್ರೀತಿಯನ್ನು ಜಗತ್ತಿಗೆ ಸಾರಿದ್ದರು.
ಆದರೆ, ಕಾಲಕ್ರಮೇಣ ದಂಪತಿಗಳ ನಡುವೆ ಬಿರುಕು ಮೂಡಿದ್ದು, ಇತ್ತೀಚೆಗೆ ಹನ್ಸಿಕಾ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ ಮದುವೆಯ ಫೋಟೋಗಳನ್ನು ಡಿಲೀಟ್ ಮಾಡಿದ್ದರು. ಇದು ಅವರ ವಿಚ್ಛೇದನದ ವದಂತಿಗಳಿಗೆ ಪುಷ್ಟಿ ನೀಡಿತ್ತು. ಇದೀಗ ಕಾನೂನುಬದ್ಧವಾಗಿ ಬೇರ್ಪಟ್ಟಿರುವ ಈ ಜೋಡಿ, ಈದೀಗ ಪ್ರತ್ಯೇಕ ದಾರಿಯಲ್ಲಿ ಸಾಗಲು ನಿರ್ಧರಿಸಿದ್ದಾರೆ. ಆದರೆ ಹನ್ಸಿಕಾ ಈ ಕುರಿತು ಸದ್ಯಕ್ಕೆ ಯಾವುದೇ ಹೇಳಿಕೆ ನೀಡಿಲ್ಲ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net