ಇದು ಬಾಲಕಿಯರ ಹತ್ಯಾಕಾಂಡ: ಇರಾನ್ ಶಾಲೆ ಮೇಲಿನ ಕ್ಷಿಪಣಿ ದಾಳಿಯನ್ನು ಖಂಡಿಸಿದ ಜಾರ್ಜಿಯಾ ಮೆಲೋನಿ | Georgia Meloni

ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni)
ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni)
Published on

ಪ್ರಮುಖ ಮುಖ್ಯಾಂಶಗಳು

  • ಮಧ್ಯಪ್ರಾಚ್ಯದಲ್ಲಿ ಮುಂದುವರಿದ ಸಂಘರ್ಷ
  • ಇರಾನ್‌ನ ಶಾಲೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ 165ಕ್ಕೂ ಹೆಚ್ಚು ಮಕ್ಕಳ ದುರ್ಮರಣ
  • ಇದು ಬಾಲಕಿಯರ ಹತ್ಯಾಕಾಂಡ ಎಂದ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ
ಇಟಲಿ: ಮಧ್ಯಪ್ರಾಚ್ಯದಲ್ಲಿ ಭುಗಿಲೆದ್ದಿರುವ ಯುದ್ಧದ ಜ್ವಾಲೆ ಮುಗ್ಧ ಬಾಲಕಿಯರ ಪ್ರಾಣವನ್ನು ಬಲಿ ಪಡೆದಿದೆ. ದಕ್ಷಿಣ ಇರಾನ್‌ನ ಮಿನಾಬ್‌ ನಗರದಲ್ಲಿರುವ ಶಾಲೆಯೊಂದರ ಮೇಲೆ ನಡೆದ ಮಾರಕ ಕ್ಷಿಪಣಿ ದಾಳಿಯಲ್ಲಿ ಬರೋಬ್ಬರಿ 165ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಅಮಾನವೀಯ ಕೃತ್ಯವನ್ನು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ (Georgia Meloni) ಬಾಲಕಿಯರ ಹತ್ಯಾಕಾಂಡ ಎಂದು ಕರೆದು ತೀವ್ರವಾಗಿ ಖಂಡಿಸಿದ್ದಾರೆ.

ಶಾಲೆಯ ಮೇಲೆ ದಾಳಿ: ಇಟಲಿ ಪ್ರಧಾನಿ ಆಕ್ರೋಶ

ಇಟಾಲಿಯನ್ ಸೆನೆಟ್‌ನಲ್ಲಿ ಮಾತನಾಡಿದ ಮೆಲೋನಿ, ದಕ್ಷಿಣ ಇರಾನ್‌ನ ಶಾಲೆಯಲ್ಲಿ ನಡೆದ ಈ ದಾಳಿ ಅತ್ಯಂತ ಕ್ರೂರವಾದುದು. ಚಿಕ್ಕ ವಯಸ್ಸಿನ ಅಮಾಯಕ ಹುಡುಗಿಯರು ಮೃತಪಟ್ಟಿರುವುದು ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದೆ. ಈ ದಾಳಿಯ ಹೊಣೆಗಾರರನ್ನು ತಕ್ಷಣವೇ ಗುರುತಿಸಿ, ಅವರಿಗೆ ಕಠಿಣ ಶಿಕ್ಷೆಯಾಗಬೇಕು, ಎಂದು ಒತ್ತಾಯಿಸಿದ್ದಾರೆ.
ಈ ದಾಳಿ ನಡೆದಿರುವುದು ಪಶ್ಚಿಮ ಏಷ್ಯಾ ಯುದ್ಧದ ಮೊದಲ ದಿನವೇ ಎಂಬುದು ಪರಿಸ್ಥಿತಿಯ ಗಂಭೀರತೆಯನ್ನು ಎತ್ತಿ ತೋರಿಸುತ್ತದೆ. ಇರಾನ್ ಈ ಭೀಕರ ದಾಳಿಯ ಹಿಂದೆ ಅಮೆರಿಕ ಮತ್ತು ಇಸ್ರೇಲ್ ಕೈವಾಡವಿದೆ ಎಂದು ನೇರ ಆರೋಪ ಮಾಡಿದೆ. ಅತ್ತ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಹೇಳಿದ್ದರೆ, ಇಸ್ರೇಲ್ ಈ ದಾಳಿಯಲ್ಲಿ ತನಗೆ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಇಟಲಿ ಯುದ್ಧಕ್ಕೆ ಇಳಿಯುವುದಿಲ್ಲ

ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಬಗ್ಗೆ ತಮ್ಮ ದೇಶದ ನಿಲುವನ್ನು ಸ್ಪಷ್ಟಪಡಿಸಿದ ಜಾರ್ಜಿಯಾ ಮೆಲೋನಿ, ಇಟಲಿ ಯುದ್ಧದಲ್ಲಿಲ್ಲ ಮತ್ತು ನಾವು ಯಾವುದೇ ಕಾರಣಕ್ಕೂ ಈ ಯುದ್ಧವನ್ನು ಪ್ರವೇಶಿಸಲು ಬಯಸುವುದಿಲ್ಲ, ಎಂದು ಖಡಕ್ಕಾಗಿ ಹೇಳಿದ್ದಾರೆ. ಬ್ರದರ್ಸ್ ಆಫ್ ಇಟಲಿ ಪಕ್ಷದ ನಾಯಕಿಯಾಗಿರುವ ಅವರು, ದೇಶದ ರಕ್ಷಣೆಯ ದೃಷ್ಟಿಯಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಆದರೆ, ಸಂಘರ್ಷದ ಮೂಲ ಕಾರಣಗಳನ್ನು ತಳ್ಳಿಹಾಕಲು ಅವರು ನಿರಾಕರಿಸಿದ್ದಾರೆ. ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ಸಾಮರ್ಥ್ಯ ಗಳಿಸುತ್ತಿರುವುದು ಯುರೋಪ್‌ಗೆ ಕಂಟಕವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಪರಮಾಣು ಬಾಂಬ್ ಹೊಂದಿರುವ ಅಯತೊಲ್ಲಾ ಆಡಳಿತವನ್ನು ನಾವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಅದು ಇಟಲಿ ಮತ್ತು ಇಡೀ ಯುರೋಪ್‌ಗೆ ನೇರ ಅಪಾಯವನ್ನುಂಟುಮಾಡುತ್ತದೆ, ಎಂದು ಮೆಲೋನಿ ಕಳವಳ ವ್ಯಕ್ತಪಡಿಸಿದ್ದಾರೆ.

ರಾಜತಾಂತ್ರಿಕತೆಯ ಹಾದಿ ಮುಚ್ಚಿದೆಯೇ?

ಯುದ್ಧದ ಪರಿಸ್ಥಿತಿಯನ್ನು ನಿಯಂತ್ರಿಸಲು ಯುರೋಪಿಯನ್ ನಾಯಕರೊಂದಿಗೆ ಮಾತುಕತೆ ನಡೆಸುತ್ತಿರುವುದಾಗಿ ತಿಳಿಸಿರುವ ಪ್ರಧಾನಿ ಮೆಲೋನಿ, ಸದ್ಯದ ಮಟ್ಟಿಗೆ ರಾಜತಾಂತ್ರಿಕ ಮಾತುಕತೆಗಳು ಫಲಕಾರಿಯಾಗುವ ಸಾಧ್ಯತೆ ಕಡಿಮೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇರಾನ್ ನಿರಂತರವಾಗಿ ಪ್ರತೀಕಾರದ ದಾಳಿಗಳನ್ನು ಮುಂದುವರಿಸುತ್ತಿರುವಾಗ, ಶಾಂತಿ ಮಾತುಕತೆಗೆ ಮರಳುವುದು ಸದ್ಯಕ್ಕೆ ಅಸಾಧ್ಯ ಎಂದು ಅವರು ನುಡಿದಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net