ನಗದುರಹಿತ ಆರೋಗ್ಯ ಸೇವೆ, ನನಸಾಗದ ನೌಕರರ ಕನಸು: ನಿಯಮಾವಳಿ ಮಾತ್ರ ರಚನೆ, ಜಾರಿಗೆ ಅಧಿಕಾರಿಗಳ ನಿರ್ಲಕ್ಷ್ಯ

Doctor
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ರಾಜ್ಯ ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರಿಗೆ ನಗದುರಹಿತ ಆರೋಗ್ಯ ಸೇವೆ ಕನಸಾಗಿಯೇ ಉಳಿದಿದ್ದು, ಈಗ ಅವರು ಹೊಸ ಸರ್ಕಾರದತ್ತ ಎದುರು ನೋಡುತ್ತಿದ್ದಾರೆ.

ಹಿಂದಿನ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕಳೆದ ಸೆಪ್ಟಂಬರ್ ತಿಂಗಳಿನಲ್ಲಿ ನಿಯಮಾವಳಿ ಗಳನ್ನು ಬಿಡುಗಡೆ ಮಾಡಿದ್ದು ಬಿಟ್ಟರೆ ಯೋಜನೆ ಒಂದು ಹೆಜ್ಜೆಯೂ ಮುಂದೆ ಹೋಗಿಲ್ಲ. ರಾಜ್ಯ ಸರ್ಕಾರಿ ನೌಕರರು ಯಾವುದೇ ಗಂಭೀರ ಕಾಯಿಲೆಗೆ ತುತ್ತಾದರೆ ಚಿಕಿತ್ಸೆಗೆ ಸಾಲ ಮಾಡುವ ಪರಿಸ್ಥಿತಿ ಇದೆ. ಆದ್ದರಿಂದ ನಗದುರಹಿತ ಚಿಕಿತ್ಸೆಯ ಯೋಜನೆ ಬರಬೇಕೆಂದು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಹೋರಾಟ ನಡೆಸಿದ್ದಾರೆ. ಮರುಪಾವತಿಗೆ ವರ್ಷಗಟ್ಟಲೆ ಅಲೆದಾಡಿದರೂ ಪೂರ್ಣ ಮೊತ್ತ ಸಿಗು ತ್ತದೆ ಎಂಬ ವಿಶ್ವಾಸ ಇಲ್ಲ.

ಬಿಬಿಎಂಪಿ ಮತ್ತು ಪೊಲೀಸ್ ಇಲಾಖೆಯಲ್ಲಿರುವ ನಗದುರಹಿತ ಆರೋಗ್ಯ ಸೇವೆ ವ್ಯವಸ್ಥೆ ಮಾದರಿಗಾಗಿ ನೌಕರರ ಬೇಡಿಕೆ ಇದೆ. ಸರ್ಕಾರ 2014ರಲ್ಲಿ ಜ್ಯೋತಿ ಸಂಜೀವಿನಿ ಯೋಜನೆ ಜಾರಿಗೆ ತಂದಿತ್ತು. ಅದರ ಮುಂದುವರಿದ ಭಾಗ ವಾಗಿ ನಗದುರಹಿತ ಆರೋಗ್ಯ ಸೇವೆ ಬರಬೇಕು ಎಂಬುದು ನೌಕರರ ಬೇಡಿಕೆ.

ನೌಕರರ ದೇಣಿಗೆ ಸಮಸ್ಯೆ: ಸರ್ಕಾರ ಈಗ ನೌಕರರ ಆರೋಗ್ಯ ವೆಚ್ಚಕ್ಕಾಗಿ ವಾರ್ಷಿಕ 300 ರೂ. ನೀಡುತ್ತದೆ. ಅದರ ಮೊತ್ತ ಅಂದಾಜು 150 ಕೋಟಿ ರೂ.ಗಳಾಗುತ್ತದೆ. ಮೂಲ ವೇತನದ ಶೇ. 1ರಷ್ಟು ಕಡಿತ ಮಾಡಿದರೆ ಅದರ ಮೊತ್ತ 600 ಕೋಟಿ ರೂ.ಗಳಾಗುತ್ತದೆ ಎಂಬ ಅಂದಾಜಿದೆ. ಸರ್ಕಾರದ ಕೆಲವು ಮೂಲಗಳ ಪ್ರಕಾರ ಯೋಜನೆ ಜಾರಿಯಾದರೆ 1250 ಕೋಟಿ ರೂ. ವಾರ್ಷಿಕ ವೆಚ್ಚವಾಗಲಿದೆ.

500ಕ್ಕೂ ಹೆಚ್ಚು ಆಸ್ಪತ್ರೆಗಳು: ರಾಜ್ಯದಲ್ಲಿ ಆಯುಷ್ಮಾನ್ ಭಾರತ ಕರ್ನಾಟಕ ಹಾಗೂ ಸಿಜಿಎಸ್​ಎಚ್​ನಲ್ಲಿ ನೋಂದಾಯಿತ ಸುಮಾರು 500ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಸರ್ಕಾರಿ ನೌಕರರ ಆರೋಗ್ಯ ಯೋಜನೆಯ ಸೌಲಭ್ಯ ನೀಡಲು ಗುರುತಿಸಲಾಗಿದೆ. ಅಲ್ಲದೇ ಹೊರ ರಾಜ್ಯಗಳ ಆದರೆ ರಾಜ್ಯದ ಗಡಿಗೆ ಹೊಂದಿಕೊಂಡಿರುವ ನಗರ ಮತ್ತು ಪಟ್ಟಣಗಳ ಆಸ್ಪತ್ರೆಗಳನ್ನು ಸಹ ಈ ಯೋಜನೆಯಲ್ಲಿ ನೋಂದಣಿ ಮಾಡುವ ಕೆಲಸ ಇನ್ನೂ ಆಗಿಲ್ಲ ಎಂದು ಹೇಳಲಾಗುತ್ತಿದೆ.

ಎಷ್ಟು ಕಾಯಿಲೆಗೆ ಚಿಕಿತ್ಸೆ?: ಎಲ್ಲ ರೀತಿಯ ಕಾಯಿಲೆಗಳಿಗೂ ಇದರಲ್ಲಿ ಚಿಕಿತ್ಸೆ ನೀಡುವ ಉದ್ದೇಶವಿದೆ. ಸುಮಾರು 1000 ರೋಗಗಳನ್ನು ಗುರುತಿಸಲಾಗಿದೆ. ಸರ್ಕಾರದ ಆದೇಶ ಹೊರಬಿದ್ದಾಗ ಮಾತ್ರ ನಿಖರವಾದ ಮಾಹಿತಿ ಲಭ್ಯವಾಗಲಿದೆ.

ಕಳೆದ ವರ್ಷದ ಸೆಪ್ಟಂಬರ್​ನಲ್ಲಿ ನಿಯಮಾವಳಿಗಳು ಪ್ರಕಟವಾಗಿವೆ. ಈ ವರ್ಷ ಜನವರಿಯಿಂದ ಯೋಜನೆ ಜಾರಿಗೆ ಬರಬೇಕಾಗಿತ್ತು. ಯಾವ ಕಾರಣಕ್ಕೆ ತಡವಾಗಿದೆ ಎಂಬುದು ತಿಳಿಯುತ್ತಿಲ್ಲ. | ಶಾಂತರಾಮ, ಎನ್​ಪಿಎಸ್ ನೌಕರರ ಸಂಘದ ಅಧ್ಯಕ್ಷ

ಅಧಿಕಾರಿಗಳ ನಿರ್ಲಕ್ಷ್ಯ: ಯೋಜನೆ ಅನುಷ್ಠಾನಕ್ಕೆ ಅಧಿಕಾರಿ ವಲಯದಲ್ಲಿ ನಿರ್ಲಕ್ಷ್ಯ ಭಾವನೆ ಇದೆ; ಆಸ್ಪತ್ರೆಗಳ ಜತೆ ಒಪ್ಪಂದ ಮಾಡಿಕೊಳ್ಳುವ, ಯೋಜನೆಯನ್ನು ಪೈಲಟ್ ಆಧಾರದ ಮೇಲೆ ಜಾರಿಗೆ ಕೊಡುವ ಬಗ್ಗೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂಬುದು ನೌಕರರ ಅಸಮಾಧಾನವಾಗಿದೆ. ಸರ್ಕಾರದ ಮೇಲೆ ಹೆಚ್ಚಿನ ಹೊರೆಯೇನು ಬೀಳುವುದಿಲ್ಲ. ನೌಕರರಿಗೆ ಅನುಕೂಲ ಮಾಡಿಕೊಡುವ ಯೋಜನೆಗಳ ಬಗ್ಗೆ ಅಧಿಕಾರಿಗಳ ಭಾವನೆ ಯಾವಾಗಲೂ ಇದೇ ರೀತಿಯಲ್ಲಿ ಇರುತ್ತದೆ ಎಂಬುದು ನೌಕರರ ಆಕ್ಷೇಪ. ಸುವರ್ಣ ಸುರಕ್ಷಾ ಆರೋಗ್ಯ ಟ್ರಸ್ಟ್ ಮೂಲಕ ಯೋಜನೆ ಜಾರಿಗೆ ತರಬೇಕಾಗಿದೆ. ಅದಕ್ಕಾಗಿ ಪ್ರತ್ಯೇಕ ಸಾಫ್ಟ್​ವೇರ್ ಅಭಿವೃದ್ಧಿ ಮಾಡಬೇಕಾಗಿದೆ. ನೌಕರರಿಗೆ ಸ್ಮಾರ್ಟ್​ಕಾರ್ಡ್ ನೀಡಿ ಅದರ ಮೂಲಕ ಜಾರಿಗೆ ಕೊಡಬೇಕಾಗಿತ್ತು.

30 ಲಕ್ಷ ಜನರಿಗೆ ಅನುಕೂಲ: ಸರ್ಕಾರಿ ನೌಕರರು ಹಾಗೂ ಅವರ ಅವಲಂಬಿತರು ಸೇರಿ ಒಟ್ಟಾರೆ 30 ಲಕ್ಷ ಜನರಾಗುತ್ತದೆ. ಈ ಯೋಜನೆ ಜಾರಿಯಾದರೆ ಕೈಯಲ್ಲಿ ಹಣವಿಲ್ಲದಿದ್ದರೂ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬಹುದು. ಸಾಲ ಮಾಡಿಕೊಂಡು ಪಡಿಪಾಟಲು ಪಡಬೇಕಾಗಿಲ್ಲ. ಚಿಕಿತ್ಸೆ ಪಡೆದ ನಂತರ ಮರುಪಾವತಿಗಾಗಿ ಕಚೇರಿಗೆ ಅಲೆದಾಡುವ ಅಗತ್ಯವಿಲ್ಲ. ಕೇವಲ ಸರ್ಕಾರಿ ಆಸ್ಪತ್ರೆಗಳ ಮೇಲೆ ಅವಲಂಬನೆ ತಪ್ಪಲಿದೆ ಎಂಬುದು ನೌಕರರ ಆಶಯ.

ಚುನಾವಣೆ ಬಂದಿದ್ದರಿಂದ ಯೋಜನೆ ತಡವಾಗಿದೆ. ಪೈಲಟ್ ಮಾದರಿಯಲ್ಲಿ ಎರಡು ಆಸ್ಪತ್ರೆಗಳಲ್ಲಿ ಯೋಜನೆ ಜಾರಿಗೆ ತರಲು ಆರೋಗ್ಯ ಸಚಿವರ ಜತೆ ಮಾತನಾಡಿದ್ದೇವೆ. ಬೇಗ ಜಾರಿಗೆ ಬರುವ ವಿಶ್ವಾಸವಿದೆ. | ಸಿ.ಎಸ್. ಷಡಾಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘ ಅಧ್ಯಕ್ಷ

ಪ್ರಾಯೋಗಿಕ ಜಾರಿಗೆ ಒತ್ತಡ: ಎಂ.ಎಸ್. ರಾಮಯ್ಯ ಮತ್ತು ಜಯದೇವ ಆಸ್ಪತ್ರೆಗಳಲ್ಲಿ ಈ ಯೋಜನೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದು ನಂತರ ರಾಜ್ಯಾದ್ಯಂತ ವಿಸ್ತರಣೆ ಮಾಡುವಂತೆ ಸರ್ಕಾರಿ ನೌಕರರ ಸಂಘ ಒತ್ತಡ ತಂದಿದೆ. ಆ ಬಗ್ಗೆ ಸರ್ಕಾರದ ಮಟ್ಟದಲ್ಲಿ ಇನ್ನೂ ತೀರ್ವನವಾಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net