ಮಚ್ಚಂಪಾಡಿಯಲ್ಲಿ ಮನೆ ಬೀಗ ಒಡೆದು ನಗ, ನಗದು ಕಳವು

machampady
ನಗ, ನಗದು ಕಳವುಗೈಯಲಾಗಿರುವ ಮೊಗ್ರಾಲ್‌ಪುತ್ತೂರು ನಿವಾಸಿ ಇಬ್ರಾಹಿಂ ಅವರ ಮನೆ
Published on

ಕಾಸರಗೋಡು: ನಗರ ಠಾಣಾ ವ್ಯಾಪ್ತಿಯ ಮೊಗ್ರಾಲ್ ಪುತ್ತೂರು ಹಾಗೂ ಮಂಜೇಶ್ವರದ ಮಚ್ಚಂಪಾಡಿಯಲ್ಲಿ ಮನೆ ಬೀಗ ಒಡೆದು ಕಳ್ಳರು ಭಾರಿ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಕಳವುಗೈದಿದ್ದಾರೆ.

ಮೊಗ್ರಾಲ್‌ಪುತ್ತೂರು ಪೇಟೆಯ ಮಸೀದಿ ಸನಿಹದ ಫೈಸಲ್ ಮಂಜಿಲ್ ನಿವಾಸಿ ಇಬ್ರಾಹಿಂ ಎಂಬುವರ ಮನೆ ಬೀಗ ಒಡೆದು ನುಗ್ಗಿದ ಕಳ್ಳರು 45 ಪವನ್ ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ. ಇಬ್ರಾಹಿಂ ಕುಟುಂಬ ಮನೆಗೆ ಬೀಗ ಹಾಕಿ ಬೆಂಗಳೂರಿಗೆ ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದೆ. ಮನೆಯೊಳಗಿನ ಕಪಾಟು ಒಡೆದು, ಅದರೊಳಗಿದ್ದ ಸಾಮಾಗ್ರಿ ಚಲ್ಲಾಪಿಲ್ಲಿಗೊಳಿಸಲಾಗಿದೆ. ಕಾಸರಗೋಡು ನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದು, ಬೆರಳಚ್ಚು, ಶ್ವಾನದಳದೊಂದಿಗೆ ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.

ಮಂಜೇಶ್ವರ ಮಚ್ಚಂಪಾಡಿ ಸಿ.ಎಂ.ನಗರ ನಿವಾಸಿ, ವಿದೇಶದಲ್ಲಿ ಉದ್ಯೋಗಿಯಾಗಿರುವ ಇಬ್ರಾಹಿಂ ಖಲೀಲ್ ಎಂಬುವರ ಎರಡಂತಸ್ತಿನ ಮನೆ ಬೀಗ ಒಡೆದು ನುಗ್ಗಿದ ಕಳ್ಳರು ಒಂಬತ್ತು ಪವನು ಚಿನ್ನ, ಒಂಬತ್ತು ಲಕ್ಷ ರೂ.ನಗದು ಹಾಗೂ ಬೆಲೆಬಾಳುವ ವಾಚು ಕಳವುಗೈದಿದ್ದಾರೆ. ಮನೆಯವರು ಮನೆಗೆ ಬೀಗ ಹಾಕಿ ವಿದೇಶಕ್ಕೆ ತೆರಳಿದ್ದ ಸಂದರ್ಭ ಕೃತ್ಯವೆಸಗಲಾಗಿದೆ. ಮನೆಯ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಇಬ್ಬರು ಹೆಲ್ಮೆಟ್‌ಧಾರಿಗಳು ಮನೆಯೊಳಗೆ ಕಳವು ನಡೆಸುವ ದೃಶ್ಯ ಸೆರೆಯಾಗಿದೆ. ಇಬ್ರಾಹಿಂ ಖಲೀಲ್ ಅವರ ಸಹೋದರ ಅಬೂಬಕ್ಕರ್ ಸಿದ್ದೀಕ್ ನೀಡಿದ ದೂರಿನನ್ವಯ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net