

ಕಾಸರಗೋಡು: ಸಮಾಜಬಾಹಿರ ಕೃತ್ಯ, ಮಾದಕ ದ್ರವ್ಯ ಸಾಗಾಟ, ಬಳಕೆ, ಗೂಂಡಾ ವಿರುದ್ಧ ಕಾರ್ಯಾಚರಣೆಯನ್ವಯ ಕಾಸರಗೋಡು ಜಿಲ್ಲೆಯಲ್ಲಿ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ. ಇಂತಹ ಕೃತ್ಯಗಳಲ್ಲಿ ತೊಡಗಿಕೊಂಡಿರುವವರ ನಿಗ್ರಹಕ್ಕಾಗಿ ಆ್ಯಗ್, ಡಿ-ಹಂಟ್ ಮುಂತಾದ ವಿಶೇಷ ಕಾರ್ಯಾಚರಣೆ ಮೂಲಕ ಜಿಲ್ಲಾ ಪೊಲೀಸ್ ಮುಂದುವರಿಯುತ್ತಿದೆ.
ಸಮಾಜಬಾಹಿರ ಕೃತ್ಯಗಳಲ್ಲಿ ತೊಡಗಿಸಿಕೊಂಡಿರುವವರ ಪತ್ತೆಗಾಗಿ ಆ್ಯಗ್ ಕಾರ್ಯಾಚರಣೆ ಮುಂದುವರಿಸಲಾಗಿದ್ದು, ಕಳೆದ ಮೂರು ದಿವಸಗಳಲ್ಲಿ 18 ಮಂದಿಯನ್ನು ಬಂಧಿಸಲಾಗಿದೆ. ಹಲವು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ತಲೆಮರೆಸಿಕೊಂಡು ತಿರುಗಾಡುತ್ತಿದ್ದ 67 ಮಂದಿಯನ್ನು ಬಂಧಿಸಿದ್ದಾರೆ. ಗಂಭೀರ ಸ್ವರೂಪದ ಪ್ರಕರಣಗಳ ನಾಲ್ವರು ಹಾಗೂ ಇತರ ಸಾಮಾನ್ಯ ಪ್ರಕರಣಗಳಲ್ಲಿ ಆರೋಪಿಗಳಾಗಿರುವ 11 ಮಂದಿಯನ್ನು ಬಂಧಿಸಲಾಗಿದೆ.
ಕಳೆದ ಮೂರು ದಿನಗಳಲ್ಲಿ 135 ಮಂದಿಯ ಮನೆಗಳಿಗೆ ದಾಳಿ ನಡೆಸಲಾಗಿದ್ದು, ಗಾಂಜಾ, ಎಂಡಿಎಂಎ ಸೇರಿದಂತೆ ಮಾದಕ ದ್ರವ್ಯ ಕೈವಶವಿರಿಸಿಕೊಂಡ ಹಾಗೂ ಬಳಸಿದ ಪ್ರಕರಣಕ್ಕೆ ಸಂಬಂಧಿಸಿ 12 ಕೇಸು ದಾಖಲಿಸಿಕೊಂಡು 14ಮಂದಿಯನ್ನು ಬಂಧಿಸಲಾಗಿದೆ. ಗೂಂಡಾ ಯಾದಿಯಲ್ಲಿ ಹೆಸರು ಒಳಗೊಂಡು ಪೊಲೀಸರ ನಿಗಾದಲ್ಲಿದ್ದ 140 ಮಂದಿಯ ಮನೆಗಳಿಗೆ ದಾಳಿ ನಡೆಸಲಾಗಿದೆ. ಕೆಲವು ಆರೋಪಿಗಳ ರಹಸ್ಯ ಅಡಗುದಾಣಗಳ ಮೇಲೂ ನಿಗಾಯಿರಿಸಿದ್ದಾರೆ. ಗೂಂಡಾ ಕಾಯ್ದೆಯನ್ವಯ ಕಾಸರಗೋಡು, ಹೊಸದುರ್ಗ, ಬೇಕಲ, ಕುಂಬಳೆ, ಮಂಜೇಶ್ವರ ಠಾಣೆ ವ್ಯಾಪ್ತಿಯ ಐವರನ್ನು ಗಡಿಪಾರು ಮಾಡಲಾಗಿದೆ. ಗಡಿಪಾರು ಆದೇಶ ಉಲ್ಲಂಘಿಸಿ ಊರಿಗೆ ಭೇಟಿ ನೀಡಿರುವ ಮಾವಿಲಕಡಪ್ಪುರ ನಿವಾಸಿ ಅಮ್ಜಾದ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಗೂಂಡಾ ಕಾನೂನು ಪ್ರಕಾರ ಜಿಲ್ಲೆಯಲ್ಲಿ ಮತ್ತಷ್ಟು ಮಂದಿ ವಿರುದ್ಧ ಕ್ರಮ ಜರುಗಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ವಲಯ ಡಿಐಜಿಗೆ ವರದಿ ಸಲ್ಲಿಸಲಾಗಿದೆ. ಎರಡಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಆರೋಪಿಗಳಾಗಿದ್ದು, ಮತ್ತೆ ಇದೇ ರೀತಿಯ ಪ್ರಕರಣಗಳಲ್ಲಿ ಶಾಮೀಲಾಗುವವರ ವಿರುದ್ಧ ಕಾಪಾ ಕಾಯ್ದೆಯನ್ವಯ ಕ್ರಮ ಜರುಗಿಲಾಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿಜೋಯ್ ತಿಳಿಸಿದ್ದಾರೆ.