ಸಮಂತಾ ಐಟಂ ಹಾಡಿನ ವಿರುದ್ಧ ಪುರುಷ ಸಂಘದವರ ದೂರು; ಅಂತಹದ್ದು ಏನಿದೆ ಈ ಹಾಡಿನಲ್ಲಿ?

Published on
ಹೈದರಾಬಾದ್: ಐಕಾನ್ ಸ್ಟಾರ್ ನಟ ಅಲ್ಲು ಅರ್ಜುನ್ ಮತ್ತು ಕೊಡಗಿನ ಕುವರಿ ನಟಿ ರಶ್ಮಿಕಾ ಮಂದಣ್ಣ ಅವರ ಮುಂಬರುವ ಚಿತ್ರ ''ಪುಷ್ಪ: ದಿ ರೈಸ್‌'' ಡಿ.17 ರಂದು ತೆರೆಕಾಣಲಿದೆ. ಈ ಪ್ಯಾನ್ ಇಂಡಿಯಾ ಸಿನಿಮಾ ಹಿಂದಿ, ಕನ್ನಡ, ಮಲಯಾಳಂ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಲಿದೆ. ಸಿನಿಮಾದ ಬಿಡುಗಡೆಗೆ ಮುಂಚಿತವಾಗಿ, ''ಪುಷ್ಪ: ದಿ ರೈಸ್'' ಒಂದು ನೆಗೆಟಿವ್ ಕಾರಣಕ್ಕೆ ಸುದ್ದಿಯಲ್ಲಿದೆ. ಹೌದು, ಕೆಲವು ದಿನಗಳ ಹಿಂದೆ ''ಪುಷ್ಪ: ದಿ ರೈಸ್'' ಚಿತ್ರದ ನಿರ್ಮಾಪಕರು ಚಿತ್ರದ ಐಟಂ ಹಾಡು, ''ಹೂಂ ಅಂತೀರಾ - ಊಹೂ ಅಂತೀರಾ'' ಲಿರಿಕಲ್ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. 3.43 ನಿಮಿಷದ ಈ ಹಾಡು ಬಹುತೇಕ ಎಲ್ಲಾ ಪಡ್ಡೆ ಹುಡುಗರ ನಿದ್ದೆ ಗೆಡಿಸಿದ್ದು, ಕೇವಲ 24 ಗಂಟೆಗಳಲ್ಲಿ ಐದೂ ಭಾಷೆಗಳಲ್ಲಿ ಸೇರಿಸಿ 20 ಮಿಲಿಯನ್ ವೀಕ್ಷಣೆಗಳನ್ನು ಪಡೆದಿದೆ. ನಟಿ ಸಮಂತಾಳ ಮಾದಕ ಲುಕ್ ಅಭಿಮಾನಿಗಳನ್ನು ನಶೆಯಲ್ಲಿ ತೆಲಿಸುವಂತಿದೆ. ಆದರೆ, ಇತ್ತೀಚಿನ ವರದಿಯ ಪ್ರಕಾರ, ಪುರುಷರ ಸಂಘದಿಂದ ನಟಿ ಸಮಂತಾ ರುತ್ ಪ್ರಭು ಅವರ ಈ ಐಟಂ ಹಾಡಿನ ವಿರುದ್ಧ ಪ್ರಕರಣ ದಾಖಲಾಗಿದೆ.
''ಹೂಂ ಅಂತೀರಾ - ಊಹೂ ಅಂತೀರಾ'' ಹಾಡಿನ ಸಾಹಿತ್ಯದಲ್ಲಿ ಮತ್ತು ದೃಶ್ಯಗಳಲ್ಲಿ ಪುರುಷರನ್ನು ಕಾಮಪ್ರಚೋದಕರೆಂಬಂತೆ ಬಿಂಬಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹಾಗಾಗಿ, ಈ ಹಾಡಿನ ವಿರುದ್ಧ ಪ್ರಕರಣವೊಂದು ದಾಖಲಿಸಲಾಗಿದೆ. ಆಂಧ್ರಪ್ರದೇಶದ ನ್ಯಾಯಾಲಯದಲ್ಲಿ ''ಹೂಂ ಅಂತೀರಾ - ಊಹೂ ಅಂತೀರಾ'' ಹಾಡನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ ಪುರುಷ ಸಂಘದವರು. ಬಹು ಭಾಷೆಗಳಲ್ಲಿ ರಿಲೀಸ್ ಆಗಿರುವ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ. ಈ ಹಾಡಿನಲ್ಲಿ ''ಸೀರೆ ತೊಟ್ಟರು, ಶಾರ್ಟಸ್ ತೊಟ್ಟರು ಗಂಡಸರು ನೋಡುತ್ತಾರೆ. ಗಂಡಸರು ನಾಚಿಕೆ ಬಿಟ್ಟವರು'' ಎಂಬ ಸಾಲುಗಳು ಹಾಡಿನ ಆರಂಭದಲ್ಲೇ ಕೇಳಿಬರುತ್ತವೆ. ಜೊತೆಗೆ, ಹಾಡಿನ ಕೋರಸ್ ಸಾಲುಗಳಲ್ಲಿ ಸಹ ''ಗಂಡಸರ ಬುದ್ಧಿಯೇ ನಿಚ'' ಎಂಬ ಅರ್ಥವನ್ನು ಮೂರು ಬಾರಿ ಸಾರುತ್ತಿವೆ. ಸದ್ಯ, ಇಂತಹ ಸಾಲುಗಳೆ ಹಲವು ಪುರುಷರ ಕೆಂಗಣ್ಣಿಗೆ ಕಾರಣವಾಗಿದೆ. 
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಐಟಂ ಹಾಡನ್ನು ಅದ್ದೂರಿಯಾಗಿ ಚಿತ್ರೀಕರಿಸಲಾಗಿದ್ದು, ಇದಕ್ಕೆ ಬಾಲಿವುಡ್ ಜನಪ್ರಿಯ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರು ನೃತ್ಯ ಸಂಯೋಜನೆ ಮಾಡಿದ್ದಾರೆ. ಆಕ್ಷನ್ ಡ್ರಾಮಾ ಆದ ''ಪುಷ್ಪ: ದಿ ರೈಸ್''ನಲ್ಲಿ ಪ್ರಮುಖ ನಟರ ಹೊರತಾಗಿ ಅನಸೂಯಾ ಭಾರದ್ವಾಜ್, ವೆನ್ನೆಲಾ ಕಿಶೋರ್, ಹರೀಶ್ ಉತ್ತಮನ್, ಸುನಿಲ್, ರಾವ್ ರಮೇಶ್, ಡಾಲಿ ಧನಂಜಯ್ ಮತ್ತು ಅಜಯ್ ಘೋಷ್ ಸಹ ಕೆಲವು ಪಾತ್ರಗಳಲ್ಲಿ ಮಿಂಚಲಿದ್ದಾರೆ. ಸಿನಿಮಾಗೆ ಸುಕುಮಾರ್ ನಿರ್ದೇಶಕರಾಗಿದ್ದು, ಡಿವಿವಿ ದಾನಯ್ಯ ಅವರು ನಿರ್ಮಾಪಕರಾಗಿದ್ದಾರೆ. ಈಗಾಗಲೇ ಗಂಡ ನಾಗಚೈತನ್ಯ ಅವರಿಂದ ವಿಚ್ಛೇದನ ಪಡೆದು, ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದರು ಸಮಂತಾ. ಇದೀಗ, ಈ ಹಾಡಿಂದ ಮತ್ತೆ ಸಮಂತಾಗೆ ಹೊಸ ತಲೆ ಬಿಸಿ ಆರಂಭವಾದಂತಿದೆ...
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net