

ಕಾಸರಗೋಡು: ಕಾರು ಖರೀದಿಸಿದ ಹಣ ನೀಡದೆ ವಂಚಿಸಿ ಬೆದರಿಕೆಯೊಡ್ಡಿದ ಪ್ರಕರಣಕ್ಕೆ ಸಂಬಂಧಿಸಿ ಐವರ ವಿರುದ್ಧ ಮಂಜೇಶ್ವರ ಠಾಣೆ ಪೊಲೀಸರು ಕೇಸು ದಾಖಲಿಸಿದ್ದಾರೆ. ಮಂಜೇಶ್ವರ ಹೊಸಬೆಟ್ಟು ಕಟ್ಟೆಬಜಾರ್ ಪಾಂಡ್ಯಾಲ ನಿವಾಸಿ ಮಜೀದ್ ಎಂಬುವರು ದೂರು ನೀಡಿದ್ದು, ಹೊಸಬೆಟ್ಟು ನಿವಾಸಿ ಅಹಮ್ಮದ್ ಸುಹೈಬ್, ಕಾಸರಗೋಡು ಕೂಡ್ಲು ನಿವಾಸಿಗಳಾದ ಅಬ್ದುಲ್ ರಿಸ್ವಾನ್, ಮಹಮ್ಮದ್ ಸಿನಾನ್, ಮಧೂರು ನಿವಾಸಿ ಅಶ್ಫಾಕ್, ಸೀತಾಂಗೋಳಿ ಸನಿಹದ ಮುಗು ನಿವಾಸಿ ಒಳಗೊಂಡಂತೆ ಐವರ ಮೇಲೆ ಕೇಸು ದಾಖಲಾಗಿದೆ. ಈ ಐವರು ಮಜೀದ್ ಅವರ ಕಾರನ್ನು ಖರೀದಿಸಿದ್ದು, ಸ್ವಲ್ಪ ಹಣ ಮುಂಗಡವಾಗಿ ನೀಡಿ ಉಳಿದ ಹಣ ಬಳಿಕ ನೀಡುವುದಾಗಿ ತಿಳಿಸಿದ್ದರು. ಆರೋಪಿಗಳು ಕಾರಿನ ಹಣ ನೀಡದೆ ಜೀವಬೆದರಿಕೆಯೊಡ್ಡಿರುವುದಾಗಿ ಮಜೀದ್ ಕಾಸರಗೋಡು ಹೆಚ್ಚುವರಿ ಪೊಲೀಸ್ ಸಲ್ಲಿಸಿದ ದೂರಿನಲ್ಲಿ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಎಎಸ್ಪಿ ಮಂಜೇಶ್ವರ ಠಾಣೆ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.