ಅಪಘಾತ ಬಳಿಕ ಬೆಂಕಿ ಉಂಡೆಯಂತಾದ ಕಾರ್​: ಮೂವರು ಸಜೀವ ದಹನ!

car
Published on

ಅಜ್ಮೀರ್(ರಾಜಸ್ಥಾನ): ರಾಜಸ್ಥಾನದ ಅಜ್ಮೀರ್‌ನಲ್ಲಿ ಡಿವೈಡರ್‌ಗೆ ಡಿಕ್ಕಿ ಹೊಡೆದ ನಂತರ ಕಾರು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಮೂವರು ಸುಟ್ಟು ಕರಕಲಾಗಿದ್ದಾರೆ. ಇಬ್ಬರ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

ಇಲ್ಲಿನ ಲೋಹಗಲ್ ರಸ್ತೆಯ ಪೆಟ್ರೋಲ್ ಪಂಪ್ ಬಳಿ ಶನಿವಾರ ರಾತ್ರಿ ಕಬೀರ್ ನಗರದ ಕಡೆಯಿಂದ ವೇಗವಾಗಿ ಬಂದ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರಿಗೆ ಬೆಂಕಿ ಹತ್ತಿಕೊಂಡಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಬೆಂಕಿ ಕೆನ್ನಾಲಿಗೆಯಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟಿದ್ದಾರೆ. ಇವರಲ್ಲಿ ಮೂವರು ಸುಟ್ಟು ಕರಕಲಾದರು. ಇಬ್ಬರು ಗಂಭೀರ ಸುಟ್ಟಗಾಯಗಳಿಂದ ಹೊರಕ್ಕೆ ಹಾರಿದ್ದು, ಜೆಎಲ್‌ಎನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಾಹಿತಿ ಬರುತ್ತಿದ್ದಂತೆ ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಹತೋಟಿಗೆ ತಂದದರು.

ಅಪಘಾತದಲ್ಲಿ ಕಬೀರ್ ನಗರ ನಿವಾಸಿ ಶಕ್ತಿ ಸಿಂಗ್, ವೈಶಾಲಿ ನಗರ ನಿವಾಸಿ ಜೈ ಸಂಖ್ಲಾ ಮತ್ತು ಚೌರಾಸಿವಾಸ್ ನಿವಾಸಿ ಸೊಹೈಲ್ ಖಾನ್ ಮೃತಪಟ್ಟರೆ, ಗುರ್ಜರ್ ಧರ್ತಿ ನಿವಾಸಿ ಉಮೇಶ್ ಕುಮಾರ್ ಮತ್ತು ಲೋಹಾ ಖಾನ್ ನಿವಾಸಿ ಕೃಷ್ಣ ಮುರಾರಿ ಆಸ್ಪತ್ರೆ ಪಾಲಾಗಿದ್ದಾರೆ ಎಂದು ಕ್ರಿಶ್ಚಿಯನ್ ಗಂಜ್ ಪೊಲೀಸ್ ಠಾಣೆ ಪ್ರಭಾರಿ ರವೀಂದ್ರ ಖೇಗಿ ತಿಳಿಸಿದ್ದಾರೆ.

ಕಾರಿಗೆ ಬೆಂಕಿ ಹೊತ್ತಿಕೊಂಡ ನಂತರ, ಹತ್ತಿರದ ರೆಸ್ಟೋರೆಂಟ್‌ನಲ್ಲಿ ಕೆಲಸ ಮಾಡುತ್ತಿದ್ದ ದೀಪಕ್ ಸಿಂಗ್ ಮತ್ತು ಶಂಭು ಸಿಂಗ್ ಸ್ಥಳಕ್ಕೆ ಬಂದು ಕಾರಿನ ಗಾಜು ಒಡೆದು ಮೂವರು ಯುವಕರನ್ನು ಹೊರತೆಗೆದಿದ್ದಾರೆ. ಈ ವೇಳೆ ಕಾರಿನ ಟೈರ್ ಕೂಡ ಒಡೆದಿದೆ. ದೊಡ್ಡ ಅಪಘಾತ ಸಂಭವಿಸಬಹುದೆಂಬ ಭಯದಿಂದ ಜನ ಕಾರಿನಿಂದ ದೂರ ಉಳಿದರು. ಬೆಂಕಿ ಹೆಚ್ಚಾದ್ದರಿಂದ ಇಬ್ಬರನ್ನು ಕಾರಿನಿಂದ ಇಳಿಸಲು ಸಾಧ್ಯವಾಗಿಲ್ಲ.

ಗ್ಯಾಸ್​ ಕಿಟ್​ ನಿಂದ ಭಾರಿ ಅನಾಹುತ: ಕಾರಿನಲ್ಲಿ ಗ್ಯಾಸ್ ಕಿಟ್ ಅಳವಡಿಸಲಾಗಿತ್ತು. ಇದರಿಂದಾಗಿಯೇ ಕಾರಿಗೆ ವೇಗವಾಗಿ ಬೆಂಕಿ ಹೊತ್ತಿಕೊಂಡಿದೆ. ಇನ್ನು ಕಾರ್​ ಅತಿವೇಗದಿಂದ ಚಲಿಸಿದ್ದು, ಡಿಕ್ಕಿಯ ನಂತರ, ಕಾರು ವಿರುದ್ಧ ದಿಕ್ಕಿನಲ್ಲಿ ತಿರುಗಿ ಪಲ್ಟಿ ಹೊಡೆದು ಬಿದ್ದಿದೆ. ಮತ್ತು ಸ್ವಲ್ಪ ಸಮಯದೊಳಗೆ ಬೆಂಕಿಯ ಉಂಡೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net