

ಫ್ಲೋರಿಡಾ(ಅಮೆರಿಕಾ): ಡಿಸ್ನಿಯ ಅನಿಮಲ್ ಕಿಂಗ್‌ಡಮ್‌ನಲ್ಲಿ ಶನಿವಾರ ಆಫ್ರಿಕನ್ ಆನೆ ಹೆಣ್ಣು ಕರುವಿಗೆ ಜನ್ಮ ನೀಡಿತು. ಅರೆ ಇದೇನಿದು ವಿಶೇಷ ಎನ್ನುತ್ತೀರಾ? ಹೌದು ಏಳು ವರ್ಷದ ನಂತರ ಮೊದಲ ಬಾರಿಗೆ ಆನೆ ಮರಿ ಹಾಕಿದ್ದು, ಇದೊಂದು ಮಹತ್ವದ ದಿನ ಎಂದು ಅಲ್ಲಿನ ಅಧಿಕಾರಿಗಳು ಸಂಭ್ರಮಿಸಿದರು.
ಕೊರ್ರಾ ಎಂಬ ಹೆಸರಿನ ಹೆಣ್ಣು ಮರಿ ಜನನದ ಸಮಯದಲ್ಲಿ 218 ಪೌಂಡ್ ತೂಕವಿತ್ತು. ಆರೋಗ್ಯವಾಗಿರುವ ಮರಿ ತನ್ನ ತಾಯಿ ನಾದಿರಾಳೊಂದಿಗೆ ಹಾಲು ಕುಡಿದು, ಆಟವಾಡುತ್ತ ಇದೆ ಎಂದು ಡಿಸ್ನಿ ಪಾರ್ಕ್ಸ್ ಮತ್ತು ರೆಸಾರ್ಟ್ಸ್ ವರ್ಲ್ಡ್‌ವೈಡ್‌ನ ಪ್ರಾಣಿ ಮತ್ತು ವಿಜ್ಞಾನ ಕಾರ್ಯಾಚರಣೆಗಳ ನಿರ್ದೇಶಕ ಸ್ಕಾಟ್ ಟೆರೆಲ್ ಬ್ಲಾಗ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ನಾದಿರಾಗೆ ಕೊರ್ರಾ ಮೊದಲ ಮರಿಯಾಗಿದ್ದು, "ಹೆಚ್ಚುವರಿ ವಿಶೇಷ" ಎಂದು ಸ್ಕಾಟ್ ಟೆರೆಲ್ ಹೇಳಿದರು, ಏಕೆಂದರೆ ನಾದಿರಾ 2005 ರಲ್ಲಿ ಡಿಸ್ನಿಯ ಅನಿಮಲ್ ಕಿಂಗ್‌ಡಮ್‌ನಲ್ಲಿ ಜನಿಸಿತ್ತು. ಇದು ಉದ್ಯಾನವನದಲ್ಲಿ ಎರಡನೇ ತಲೆಮಾರಿನ ಮೊದಲ ಕರುವಾಗಿದೆ.
2022 ರ ಆರಂಭದಲ್ಲಿ ನೈಸರ್ಗಿಕ ಸಂತಾನೋತ್ಪತ್ತಿಯ ಮೂಲಕ ನಾದಿರಾ ಗರ್ಭಿಣಿಯಾಗಿತ್ತು. 22 ತಿಂಗಳು ವಿಶೇಷ ತಂಡ ಅದರ ಆರೈಕೆಯನ್ನು ಮಾಡಿದ್ದರು. ಮುದ್ದಾದ ಹೆಣ್ಣು ಮರಿ ಜನನವಾಗುತ್ತಿದ್ದಂತೆ ತಂಡ ಸಂತಸಪಟ್ಟಿದೆ.
ಡಿಸ್ನಿಯಲ್ಲಿ ಆಫ್ರಿಕನ್ ಆನೆಗಳ ಜನನವನ್ನು ಅಸೋಸಿಯೇಷನ್ ಆಫ್ ಝೂಸ್ ಮತ್ತು ಅಕ್ವೇರಿಯಮ್ಸ್ ಸ್ಪೀಸೀಸ್ ಸರ್ವೈವಲ್ ಪ್ಲಾನ್ ಮೂಲಕ ಯೋಜಿಸಲಾಗಿದೆ, ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನು ಅತ್ಯಂತ ಜವಾಬ್ದಾರಿಯುತವಾಗಿ ಸಂತಾನೋತ್ಪತ್ತಿ ಮಾಡಿಸಿ ಸಂರಕ್ಷಿಸುವ ಕಾರ್ಯಕ್ರಮ ಇದಾಗಿದೆ.
ನಾದಿರಾ ಗರ್ಭಿಣಿಯಾಗಿದ್ದಾಗ ಅದರ ಸಹೋದರಿ ಲೂನಾಳ ಸಹಾಯ ಮತ್ತು ಮಾರ್ಗದರ್ಶನ ಪಡೆದದುಕೊಂಡಿತ್ತು ಎಂದು ಪಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಕೊರ್ರಾ ಶೀಘ್ರ ತನ್ನ ಅಜ್ಜಿ ಡೊನ್ನಾ ಆನೆಯನ್ನು ಭೇಟಿಯಾಗಲಿದೆ. ಅದರ ಚಿಕ್ಕಮ್ಮ ಸ್ಟೆಲ್ಲಾಳನ್ನೂ ಕೂಡಿಕೊಳ್ಳಲಿದೆ. ಬಳಿಕ ಇಡೀ ಕುಟುಂಬಕ್ಕೆ ಪರಿಚಯವಾಗಿ ಎಲ್ಲ ಆನೆಗಳ ಆರೈಕರಯಲ್ಲಿ ಬೆಳೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ಬಿಸಿಲಿನ ಝಳಹೆಚ್ಚಿರುತ್ತದೆ. ಆದರೆ ಶೀತಪ್ರದೇಶವಅದ ಅಮೆರಿಕಾದಲ್ಲಿ ಅವುಗಳ ಸಂತಾನೋತ್ಪತ್ತಿ ಮಾಡುವುದು ಸವಾಲಿನ ಕೆಲಸ. ಹೀಗಾಗಿ ಆಫ್ರಿಕನ್ ಆನೆ ಮರಿ ಜನನ ಮಹತ್ವಪಡೆದುಕೊಂಡಿದೆ.
ಓಕ್ಲಹೋಮ ಸಿಟಿ ಮೃಗಾಲಯದಲ್ಲಿ ಅಳಿವಿನಂಚಿನಲ್ಲಿರುವ ಆಫ್ರಿಕನ್ ಪೇಂಟ್ ನಾಯಿ ಮರಿಗಳು ಇತ್ತೀಚೆಗೆ ಜನಿಸಿದ್ದವು. ವಿಶ್ವ ವನ್ಯಜೀವಿ ನಿಧಿಯ ಪ್ರಕಾರ, ಆಫ್ರಿಕನ್ ಆನೆಗಳು ಆರು ಟನ್‌ಗಳಷ್ಟು ತೂಕವಿರುತ್ತವೆ ಮತ್ತು ಭೂಮಿಯ ಮೇಲಿನ ಅತಿದೊಡ್ಡ ಭೂ ಪ್ರಾಣಿಗಳಾಗಿವೆ.