ಲಖನೌ: ಏಕಕಾಲದಲ್ಲಿ ಚುನಾವಣೆ ನಡೆಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಬಗ್ಗೆ ತಮ್ಮ ಪಕ್ಷದ ಸಕಾರಾತ್ಮಕ ನಿಲುವನ್ನು ಹೊಂದಿದೆ ಎಂದು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಅಧ್ಯಕ್ಷೆ ಮಾಯಾವತಿ ಬುಧವಾರ (ಸೆಪ್ಟೆಂಬರ್ 18) ಹೇಳಿದ್ದಾರೆ.
ಒಂದು ದೇಶ, ಒಂದು ಚುನಾವಣೆ ವ್ಯವಸ್ಥೆಯಡಿಯಲ್ಲಿ ದೇಶದಲ್ಲಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಏಕಕಾಲಕ್ಕೆ ಚುನಾವಣೆ ನಡೆಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟದ ಅನುಮೋದನೆಗೆ ನಮ್ಮ ಪಕ್ಷದ ನಿಲುವು ಸಕಾರಾತ್ಮಕವಾಗಿದೆ. ಆದರೆ ಅದರ ಉದ್ದೇಶವು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯಲ್ಲಿರಬೇಕು ಎಂದು ತಿಳಿಸಿದರು.
ವರ್ಷಾಂತ್ಯದ ವೇಳೆಗೆ ನಿರೀಕ್ಷಿತ 10 ಸ್ಥಾನಗಳಿಗೆ ಉತ್ತರಪ್ರದೇಶ ವಿಧಾನಸಭಾ ಉಪಚುನಾವಣೆಯ ಸಿದ್ಧತೆಗಳನ್ನು ಪರಿಶೀಲಿಸಲು ಮಾಯಾವತಿ ಅವರು ಗುರುವಾರ (ಸೆಪ್ಟೆಂಬರ್ 19) ಎಲ್ಲಾ ಪಕ್ಷದ ಪದಾಧಿಕಾರಿಗಳ ಸಭೆಯನ್ನು ನಡೆಸಲಿದ್ದಾರೆ. ಹಾಗೂ ಪಕ್ಷದ ಸಾಂಸ್ಥಿಕ ಮತ್ತು ಸಾರ್ವಜನಿಕ ಸಂಪರ್ಕವನ್ನು ಹೆಚ್ಚಿಸಲು ವಿವಿಧ ಜನರಿಗೆ ನಿಯೋಜಿಸಲಾದ ಕೆಲಸದ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎನ್ನಲಾಗಿದೆ.
ಕೋವಿಂದ್ ಸಮಿತಿಯ ಶಿಫಾರಸಿನಂತೆ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಬಗ್ಗೆ ಒಂದು ದೇಶ, ಒಂದು ಚುನಾವಣೆಯ ಉನ್ನತ ಮಟ್ಟದ ಸಮಿತಿಯ ವರದಿಯನ್ನು ಕೇಂದ್ರ ಸಚಿವ ಸಂಪುಟದ ಮುಂದೆ ಮಂಡಿಸಿ ಸರ್ವಾನುಮತದಿಂದ ಅಂಗೀಕರಿಸಲಾಯಿತು ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಲೋಕಸಭೆ ಚುನಾವಣೆ ಘೋಷಣೆಗೂ ಮುನ್ನ ಮಾರ್ಚ್‌ನಲ್ಲಿ ವರದಿ ಸಲ್ಲಿಸಿತ್ತು. (ಏಜೆನ್ಸೀಸ್)