ಒಂದು ಕೆ.ಜಿ. ಚಿನ್ನಾಭರಣದೊಂದಿಗೆ ಪರಾರಿಯಾದ 'ವೀರ' ಸಹೋದರರು!; ಇದು ಜಸ್ಟ್​ 'ಸ್ಯಾಂಪಲ್​' ಅಷ್ಟೇ...

Untitled-1
Published on

ಬೆಂಗಳೂರು: ಇವರಿಬ್ಬರು ಅಂಥಿಂಥ ಅಣ್ಣ-ತಮ್ಮ ಅಲ್ಲ. ಇಬ್ಬರೂ 'ವೀರ'ರೇ. ಒಂದೇ ಕಡೆ ಕೆಲಸಕ್ಕಿದ್ದ ಇವರು ತಮ್ಮ ಮಾಲೀಕನಿಗೇ ಮೋಸ ಮಾಡಿದ್ದಷ್ಟೇ ಅಲ್ಲ, ಒಂದು ಕೆ.ಜಿ.ಗೂ ಅಧಿಕ ಚಿನ್ನಾಭರಣದ ಜೊತೆಗೇ ಪರಾರಿಯಾಗಿದ್ದಾರೆ. ಇವರಿಬ್ಬರನ್ನು ಪತ್ತೆ ಹಚ್ಚಿ ಚಿನ್ನಾಭರಣ ವಸೂಲಿ ಮಾಡುವ ಕೆಲಸಕ್ಕೆ ಬೆಂಗಳೂರು ಪೊಲೀಸರು ಮುಂದಾಗಿದ್ದಾರೆ.

ಈ ಸಹೋದರರಲ್ಲಿ ಒಬ್ಬನ ಹೆಸರು ಧನ್​ವೀರ್​, ಮತ್ತೊಬ್ಬನ ಹೆಸರು ಮಹಾವೀರ್. ಬೆಂಗಳೂರಿನ ನಗರತ್ ಪೇಟೆಯಲ್ಲಿರುವ ಸಂಕಿತ್​ ಜೈನ್ ಎಂಬುವವರ ಎಂ.ಪಿ. ಜುವೆಲ್ಲರ್ಸ್ ಕ್ರಾಫ್ಟ್​ ಎಂಬ ಚಿನ್ನದಂಗಡಿಯಲ್ಲಿ ಇವರು ಕೆಲಸಕ್ಕಿದ್ದರು. ಮಾಲೀಕ ಸಂಕಿತ್ ಜೈನ್ ಬಿಕ್ಸು ಎನ್ನುವ ಚಿನ್ನದಂಗಡಿಗೆ ಸ್ಯಾಂಪಲ್​ ಎಂದು ಕೊಟ್ಟಿದ್ದ 1 ಕೆ.ಜಿ. 87 ಗ್ರಾಂ ತೂಕದ ಚಿನ್ನಾಭರಣ ತರಲು ಧನ್​ವೀರ್​ನನ್ನು ಜ. 27ರಂದು ಕಳಿಸಿದ್ದರು. ಆದರೆ ತುಂಬಾ ಹೊತ್ತಾದರೂ ಬರದಿದ್ದಾಗ ಆತನ ಮೊಬೈಲ್​ಫೋನ್ ನಂಬರ್​ಗೆ ಕರೆ ಮಾಡಿದರೆ ಸ್ವಿಚ್ಡ್​ ಆಫ್​ ಬಂದಿತ್ತು.

ಬಳಿಕ ಬಿಕ್ಸು ಚಿನ್ನದಂಗಡಿಯ ಸುನೀಲ್​ ಕುಮಾರ್ ಎಂಬವರಿಗೆ ಕರೆ ಮಾಡಿ ವಿಚಾರಿಸಿದಾಗ, ಧನ್​ವೀರ್ 1.087 ಕೆ.ಜಿ. ಚಿನ್ನಾಭರಣ ತೆಗೆದುಕೊಂಡು ಅಣ್ಣ ಮಹಾವೀರ್ ಜತೆ ಹೋಗುವುದಾಗಿ ಹೇಳಿ ಹೋಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಇಬ್ಬರೂ ಚಿನ್ನಾಭರಣದೊಂದಿಗೆ ಅಂಗಡಿಗೆ ಮರಳದ ಕಾರಣ ವೀರ್ ಸಹೋದರರ ವಿರುದ್ಧ ಕಳ್ಳತನದ ಆರೋಪ ಹೊರಿಸಿ ಜ. 28ರಂದು ಹಲಸೂರು ಪೊಲೀಸ್ ಠಾಣೆಯಲ್ಲಿ ಸಂಕಿತ್ ಜೈನ್​ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net