ಹೌದು.. ಅವನೇ ಅಪರಾಧಿ; ಎಟಿಎಂನಲ್ಲಿ ಜ್ಯೋತಿ ಉದಯ್​ ಮೇಲಿನ 7 ವರ್ಷಗಳ ಹಿಂದಿನ ಹಲ್ಲೆ ಪ್ರಕರಣ, 3 ವರ್ಷಗಳ ಬಳಿಕ ಆರೋಪ ಸಾಬೀತು...

Feature
Published on

ಬೆಂಗಳೂರು: ಬೆಂಗಳೂರಿನ ಕಾರ್ಪೋರೇಷನ್​ ಬ್ಯಾಂಕ್​ ಎಟಿಎಂನಲ್ಲಿ ಬ್ಯಾಂಕ್ ಉದ್ಯೋಗಿ ಜ್ಯೋತಿ ಉದಯ್​ ಮೇಲೆ ನಡೆದಿದ್ದ ಏಳು ವರ್ಷಗಳ ಹಿಂದಿನ ಹಲ್ಲೆ ಪ್ರಕರಣದಲ್ಲಿ ಆರೋಪ ಸಾಬೀತಾಗಿದ್ದು, ಆತನೇ ಅಪರಾಧಿ ಎಂಬುದನ್ನು ಕೋರ್ಟ್​ ಘೋಷಿಸಿದೆ.

ಬೆಂಗಳೂರಿನ ಬಿಬಿಎಂಪಿ ಕಚೇರಿ ಸಮೀಪದ ಜೀವ ವಿಮಾ ನಿಗಮದ ಕಟ್ಟಡದಲ್ಲಿರುವ ಕಾರ್ಪೋರೇಷನ್​ ಬ್ಯಾಂಕ್​ ಎಟಿಎಂಗೆ 2013ರ ನ. 11ರಂದು ಹೋಗಿದ್ದ ಜ್ಯೋತಿ ಉದಯ್ ಮೇಲೆ ವ್ಯಕ್ತಿಯೊಬ್ಬ ಗಂಭೀರವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದ. ಬಳಿಕ ತೀವ್ರ ಹುಡುಕಾಟದ ಮೇಲೆ ಪತ್ತೆ ಹಚ್ಚಿದ್ದ ಪೊಲೀಸರು 2017ರ ಮೇ 8ರಂದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.

ಎಸ್​.ಜೆ. ಪಾರ್ಕ್​ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಈ ಪ್ರಕರಣ ಸಂಬಂಧ ಸಿಸಿಎಚ್​ 65ರ ನ್ಯಾಯಾಧೀಶೆ ರಾಜೇಶ್ವರಿ ಅವರು ಇಂದು ಆದೇಶ ನೀಡಿದ್ದಾರೆ. ಆರೋಪಿ ಮಧುಕರ್ ರೆಡ್ಡಿ ವಿರುದ್ಧವಿದ್ದ ಆರೋಪ ಸಾಬೀತಾಗಿದ್ದು, ನಾಳೆ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ. ಪ್ರಕರಣದ ಕುರಿತು ಸತತ‌ ಮೂರು ವರ್ಷಗಳಿಂದ ವಿಚಾರಣೆ ನಡೆದಿದ್ದು, ಸರ್ಕಾರ ಪರ ವಕೀಲ ಎಂ.ವಿ.ತ್ಯಾಗರಾಜ್ ವಾದ ಮಂಡಿಸಿದ್ದರು.

(ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net