

| ಹರ್ಷವರ್ಧನ್ ಬ್ಯಾಡನೂರು
"ಪ್ರೇಮಂ ಪೂಜ್ಯಂ', "ಜೂಲಿಯೆಟ್ 2' ಚಿತ್ರಗಳಲ್ಲಿ ಭಿನ್ನ ಪಾತ್ರಗಳಲ್ಲಿ ನಟಿಸಿರುವ ಬೃಂದಾ ಆಚಾರ್ಯ ಇದೀಗ "ಕೌಸಲ್ಯಾ ಸುಪ್ರಜಾ ರಾಮ' ಚಿತ್ರದ ಮೂಲಕ ವಾಪಸ್ಸಾಗಿದ್ದಾರೆ. ಶಶಾಂಕ್ ನಿರ್ದೇಶನದ ಈ ಚಿತ್ರದಲ್ಲೂ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದೀ ಶುಕ್ರವಾರ ಸಿನಿಮಾ ತೆರೆಗೆ ಬರಲಿದ್ದು, ಆ ಖುಷಿಯಲ್ಲಿ ಬೃಂದಾ ವಿಜಯವಾಣಿ ಜತೆ ಮಾತನಾಡಿದ್ದಾರೆ.
ಚಿತ್ರದಲ್ಲಿ ನಿಮ್ಮ ಪಾತ್ರ ಹೇಗಿರಲಿದೆ?
ನಾನಿಲ್ಲಿ ಶಿವಾನಿ ಪಾತ್ರದಲ್ಲಿ ನಟಿಸಿದ್ದೇನೆ. ನನಗಂತೂ ತುಂಬ ಇಷ್ಟವಾದ ಪಾತ್ರ. ಅಷ್ಟು ಸಿಹಿಯಾದ ರೋಲ್. ಹಲವಾರು ಹೆಣ್ಣುಮಕ್ಕಳು ರಿಲೇಟ್ ಮಾಡಿಕೊಳ್ಳಬಹುದು. ಯಾವಾಗಲೂ ಖುಷಿಯಾಗಿರುತ್ತಾಳೆ. ಬಬ್ಲಿಯಾಗಿ ಕಾಣುವ, ಸ್ಪಷ್ಟತೆಯಿರುವ ಹುಡುಗಿ. ಹೆಣ್ಣುಮಕ್ಕಳನ್ನು ದ್ವೇಷಿಸುವ ಹುಡುಗನೊಬ್ಬ, ಆಕೆಯನ್ನು ಪ್ರೀತಿಸುತ್ತಾನೆ ಅಂದರೆ, ಆಕೆ ಎಷ್ಟು ಸ್ವೀಟ್ ಅಂತ ಊಹಿಸಿಕೊಳ್ಳಿ. ಗರ್ಲ್್ರೆಂಡ್ ಅಂದರೆ ಹೀಗಿರಬೇಕಪ್ಪಾ ಅಂತ ಹುಡುಗರು ಇಷ್ಟಪಡಬೇಕು ಹಾಗಿರುತ್ತಾಳೆ. ಇನ್ನು ಹೆಚ್ಚು ಹೇಳಿಕೊಳ್ಳಲು ಆಗುವುದಿಲ್ಲ. ಅದನ್ನು ತೆರೆಯ ಮೇಲೆ ನೋಡಿದರೇ ಚಂದ.