ಧರ್ಮ ಶಿಕ್ಷಣ ಸಂಸ್ಕಾರಕ್ಕೆ ರಹದಾರಿ : ಮಾಣಿಲಶ್ರೀ ಆಶೀರ್ವಚನ

New Project (5)
Published on

ಸುಬ್ರಹ್ಮಣ್ಯ: ದೇವಿಯ ಪ್ರೇರಣೆ ಇದ್ದರೆ ಯಾವುದೇ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ. ಪವಿತ್ರ ತಾಣಗಳಾದ ದೇವಾಲಯದ ಪರಿಸರವನ್ನು ಹೇಗೆ ಇರಿಸಿಕೊಳ್ಳಬೇಕು ಎನ್ನುವುದು ನಮಗೆ ತಿಳಿದಿರಬೇಕು. ಮಕ್ಕಳಿಗೆ ಧರ್ಮ ಶಿಕ್ಷಣ ನೀಡಬೇಕು. ಇದು ಮಕ್ಕಳನ್ನು ಸುಸಂಸ್ಕೃತಗೊಳಿಸುತ್ತದೆ. ಧರ್ಮ ಶಿಕ್ಷಣ ಬದುಕಿಗೆ ಸಂಸ್ಕಾರವನ್ನು ಬೋಧಿಸುವ ರಹದಾರಿಯಾಗಿದೆ ಎಂದು ಶ್ರೀ ಮಹಾಲಕ್ಷ್ಮೀ ಸಂಸ್ಥಾನಂ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.

ಕೇರ್ಪಡ ಶ್ರಿ ಮಹಿಷಮರ್ದಿನಿ ದೇವಸ್ಥಾನದ ಅಷ್ಟಬಂಧ ಬ್ರಹ್ಮಕಲಶೋತ್ಸವದಲ್ಲಿ ಸೋಮವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು.

ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಿವಾನಂದ ಬೊಳ್ಕಜೆ, ಕೋಶಾಧಿಕಾರಿ ವೆಂಕಪ್ಪ ಗೌಡ ಆಲಾಜೆ, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ರೂಪರಾಜ ರೈ ಕೆ.ಪಜಂಬಿಲ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಅನೂಪ್ ಕುಮಾರ್ ಆಳ್ವ ಕೆ ಉಪಸ್ಥಿತರಿದ್ದರು.

ಧಾರ್ಮಿಕ ಸಭೆಗೆ ಆಗಮಿಸಿದ ಗಣ್ಯರಿಗೆ ಸ್ಮರಣಿಕೆಯೊಂದಿಗೆ ಸಸಿ ನೀಡುವ ಮೂಲಕ ಅರಣ್ಯ ಸಮೃದ್ಧಿಯ ಜಾಗೃತಿ ಮೂಡಿಸಲಾಯಿತು.

ಶಾಸಕರಿಂದ ಕುಣಿತ ಭಜನೆ

ಎಣ್ಮೂರಿನ ಶ್ರೀರಾಮ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕುಣಿತ ಭಜನೆ ಮಾಡಿದ ಮಕ್ಕಳೊಂದಿಗೆ ಶಾಸಕಿ ಭಾಗೀರಥಿ ಮುರುಳ್ಯ ಕೂಡಾ ಹೆಜ್ಜೆ ಹಾಕಿ ಕುಣಿತ ಭಜನಾ ಸೇವೆ ಮಾಡಿದರು. ನಂತರ ಯಕ್ಷಗುರು ಲಕ್ಷ್ಮಣ ಆಚಾರ್ಯ ಎಡಮಂಗಲ ನಿರ್ದೇಶನದಲ್ಲಿ ಶ್ರೀ ಮಹಿಷಮರ್ದಿನಿ ಕಲಾಸಂಘ ಕೇರ್ಪಡ ಇವರಿಂದ ಶ್ರೀ ಮಹಿಷಮರ್ದಿನಿ ಯಕ್ಷಗಾನ ಪ್ರದರ್ಶಿತವಾಯಿತು.

ದೊಡ್ಡ ರಂಗಪೂಜೆ, ವಸಂತ ಕಟ್ಟೆಪೂಜೆ

ಸೋಮವಾರ ರಾತ್ರಿ ಶ್ರೀ ದೇವಿಗೆ ದೊಡ್ಡ ರಂಗಪೂಜೆ ನೆರವೇರಿತು. ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳು ವಿವಿಧ ವೈದಿಕ ವಿದಿವಿಧಾನಗಳನ್ನು ನಡೆಸಿ ದೇವಿಗೆ ರಂಗಪೂಜೆ ಸಮರ್ಪಿಸಿದರು. ದೇವಳದ ಪ್ರಧಾನ ಅರ್ಚಕ ಶ್ರೀಹರಿ ಕುಂಜೂರಾಯ ಸಹಕರಿಸಿದರು.

ಬಳಿಕ ದೇವರಿಗೆ ಮಹಾಪೂಜೆ ನಡೆಯಿತು. ದೇವರ ಬಲಿ ಹೊರಟು ಭೂತಬಲಿ ಉತ್ಸವ, ವಸಂತ ಕಟ್ಟೆ ಪೂಜೆ ನೆರವೇರಿತು. ಆಕರ್ಷಕ ಬೆಡಿ ಪ್ರದರ್ಶನ ನೆರವೇರಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net