ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಾಲ್ವರ ಬಂಧನ

arrested
Published on

ಮಂಗಳೂರು: ಉಳ್ಳಾಲದ ಮಡ್ಯಾರು ಎಂಬಲ್ಲಿ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರಿಗೆ ಯುವಕರ ತಂಡವೊಂದು ಏಕಾಏಕಿ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ದೀಪಂಕರ್ ದಾಸ್, ಬಿಪ್ಲವ್ ದಾಸ್, ಗಣೇಶ್ ಬೈದ್ಯ, ಆಕಾಶ್ ಗಯಾನ್, ಧನಂಜಯ ಮೊಂಡಲ್, ರಾಹುಲ್, ಪ್ರಶಾಂತ್ ಅವರು ಹಲ್ಲೆಯಿಂದ ಗಾಯಗೊಂಡವರು. ಕೋಟೆಕಾರು, ಬೀರಿಯ ಈವೆಂಟ್ ಸಂಸ್ಥೆಯೊಂದರಲ್ಲಿ ಇವರು ಕೆಲಸ ಮಾಡುತ್ತಿದ್ದರು. ಈ ಸಂಸ್ಥೆಯ ಶೆಡ್‌ನಲ್ಲಿ ವಾಸವಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ನಿವಾಸಿ ರಾಹುಲ್, ಅಕ್ಷಯ್, ಗುರುಮೂರ್ತಿ ಹಾಗೂ ಸಿಂಚನ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. ಹಲ್ಲೆಯಲ್ಲಿ ಭಾಗಿಯಾದ ಉಳಿದ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ಇನ್ನೋವಾ ಕಾರಿನಲ್ಲಿ ಬಂದ ಯುವಕರು ಅವಾಚ್ಯ ಶಬ್ದಗಳಿಂದ ನಿಂದಿಸಿ ಮರದ ಸೋಂಟೆಗಳಿಂದ ಹಲ್ಲೆ ನಡೆಸಿದ್ದಾರೆ. ಗಂಭೀರ ಗಾಯಗೊಂಡ ಕಾರ್ಮಿಕರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಡೆಕೋರೇಷನ್ ಕೆಲಸ ಮಾಡುವ ಎರಡು ತಂಡಗಳ ನಡುವಿನ ದ್ವೇಷದಲ್ಲಿ ಹಲ್ಲೆ ಘಟನೆ ನಡೆದಿದ್ದು, ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net