ಖಾಸಗಿ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಸುಟ್ಟೇ ಹೋದ್ವು ಬಾಲಕನ ಕಾಲುಗಳು; ಪೊಲೀಸರಿಗೆ ದೂರು

Feature
Published on

ಆನೇಕಲ್​: ಖಾಸಗಿ ಸಂಸ್ಥೆಯೊಂದರ ನಿರ್ಲಕ್ಷ್ಯದಿಂದಾಗಿ ಬಾಲಕನ ಎರಡೂ ಕಾಲು ಸುಟ್ಟುಹೋಗಿದ್ದು, ಆತ ಒಂದು ವಾರದಿಂದ ಆಸ್ಪತ್ರೆಯಲ್ಲಿ ಯಾತನೆಯಿಂದ ನರಳುವಂತಾಗಿದೆ. ಹತ್ತು ವರ್ಷದ ಚಂದ್ರು ಗಾಯಗೊಂಡಿರುವ ಬಾಲಕ. ಬೆಂಗಳೂರಿನ ಹೊಲಯದ ಅತ್ತಿಬೆಲೆಯ ಇಚ್ಚಂಗೂರು ಕೆರೆ ಬಳಿ‌ ಈ ದುರಂತ ನಡೆದಿದ್ದು, ಒಂದು ವಾರದ ಬಳಿಕ ಬೆಳಕಿಗೆ ಬಂದಿದೆ. ಅತ್ತಿಬೆಲೆ ಕೈಗಾರಿಕಾ ಪ್ರದೇಶದ ರಾಮಯ್ಯ ಫ್ಲೋರ್ ಮಿಲ್‌ ಮಾಲೀಕರ ನಿರ್ಲಕ್ಷ್ಯದಿಂದ ಈ ಪ್ರಕರಣ ನಡೆದಿದೆ ಎಂದು ಆರೋಪಿಸಲಾಗಿದೆ.

ಫ್ಲೋರ್​ಮಿಲ್​ನಲ್ಲಿನ ಬಿಸಿಯಾದ ತ್ಯಾಜ್ಯವನ್ನು ಬಹಳ ದಿನಗಳಿಂದ ಪಕ್ಕದಲ್ಲೇ ಇರುವ ಕೆರೆಗೆ ಸುರಿಯುತ್ತಿದ್ದು, ದಾರಿಯಲ್ಲಿ ಬಿದ್ದಿರುವ ಅವು ಮೇಲ್ನೋಟಕ್ಕೆ ಬತ್ತ ಹಾಗೂ ಗೋಧಿಯ ಹಿಂಡಿಯಂತೆ ಕಂಡರೂ ಕಾಲಿಟ್ಟರೆ ಸುಟ್ಟುಹೋಗುವಷ್ಟು ಬಿಸಿ ಇರುತ್ತವೆ. ಕಳೆದ ವಾರ ತಾಯಿ ಜತೆ ಕಟ್ಟಿಗೆಗೆಂದು ಹೋಗಿದ್ದ ಚಂದ್ರು ಈ ತ್ಯಾಜ್ಯ ರಾಶಿಯಲ್ಲಿ ಕಾಲಿಟ್ಟಿದ್ದಾನೆ. ಕೂಡಲೇ ಆತ ಬಿಸಿಗೆ ಬೆಚ್ಚಿ ಬಿದ್ದು ಕುಸಿದು ಬಿದ್ದಿದ್ದು, ಎರಡೂ ಪಾದ ಹಾಗೂ ಅದಕ್ಕೂ ಮೇಲ್ಭಾಗದವರೆಗೆ ಕಾಲುಗಳು ಸುಟ್ಟುಹೋಗಿವೆ.

ಸ್ಥಳೀಯರ ನೆರವಿನಿಂದ ರಕ್ಷಿಸಿ ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಬಾಲಕ ಚಿಕಿತ್ಸೆಯಲ್ಲಿದ್ದಾನೆ. ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಂಸ್ಥೆ ಮಾಲೀಕರು ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎನ್ನಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net