ಅದ್ಧೂರಿ ಮದ್ವೆಯಾದ ಮಾರನೇ ದಿನವೇ ಪತ್ನಿಗೆ ಬಿಗ್​ ಶಾಕ್​ ಕೊಟ್ಟ ಪತಿಯಿಂದ ಮತ್ತೊಂದು ಆಘಾತ!

Husband
Published on

ಇಂದೋರ್​: ಮದುವೆಯಾದ ಕೆಲವೇ ದಿನಗಳಲ್ಲಿ ಪತ್ನಿಗೆ ಕೈಕೊಟ್ಟು ನಾಪತ್ತೆಯಾದ ನವವಿವಾಹಿತ ತನ್ನ ಪ್ರೇಯಸಿಯೊಂದಿಗೆ ಮದುವೆ ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ ನಗರದ ಬಂಗಂಗ ಏರಿಯಾದಲ್ಲಿ ನಡೆದಿದೆ.

ಬಂಗಂಗದ ಐಜಿ ಮತ್ತು ಪೊಲೀಸ್​ ಠಾಣೆಗೆ ದೂರು ನೀಡಿದರೂ ಸಹ ಈ ಕ್ಷಣದ ವರೆಗೂ ಎಫ್​ಐಆರ್​ ದಾಖಲಾಗಿಲ್ಲ. ಪ್ರಶ್ನಿಸಿದರೆ ಏನೇನೋ ಸಬೂಬು ಹೇಳುತ್ತಾರೆಂದು ಸಂತ್ರಸ್ತೆ ಹಾಗು ಕುಟುಂಬ ಆರೋಪಿಸಿದೆ.

ಘಟನೆಯ ವಿವರಣೆಗೆ ಬರುವುದಾದರೆ, ಇಂದೋರ್​ನ ಭಗೀರಥಪುರದ ನಿವಾಸಿ ಸುರೇಶ್​ ಯಾದವ್, ತಮ್ಮ ಸೋದರನ ಮಗಳಾದ ಹಾಗೂ ತಂದೆಯನ್ನು ಕಳೆದುಕೊಂಡ ಚೇತ್ನಾ ಅಲಿಯಾಸ್​ ಸುಶಿಲಾಳನ್ನು ಮದುವೆ ಮಾಡುವುದಾಗಿ ಹೇಳಿ ಉತ್ತರ ಪ್ರದೇಶದಿಂದ ತನ್ನ ಮನೆಗೆ ಕರೆಸಿಕೊಂಡಿದ್ದರು. ಬಳಿಕ ಖರ್ಚಾ ಮೂಲದ ಮೋಹಿತ್​ ಅಲಿಯಾಸ್​ ರಣವೀರ್​ ಯಾದವ್​ಗೆ ಕೊಟ್ಟ ಡಿಸೆಂಬರ್​ 1ರಂದು ಮದುವೆ ಮಾಡಿದ್ದರು.

ಅದ್ಧೂರಿಯಾಗಿ ಮದುವೆ ಮಾಡಿಕೊಟ್ಟಿದ್ದಲ್ಲದೆ, ಗೃಹಪಯೋಗಿ ವಸ್ತುಗಳು, ಚಿನ್ನ ಮತ್ತು ಬೆಳ್ಳಿ ಆಭರಣಗಳು ಮತ್ತು ಬಲೆನೋ ಕಾರನ್ನು ಉಡುಗೊರೆಯಾಗಿ ಸುರೇಶ್​ ಯಾದವ್​ ನೀಡಿದ್ದಾರೆ. ಆದರೆ, ಅಷ್ಟಕ್ಕೆ ಸುಮ್ಮನಾಗದ ಮೋಹಿತ್​ ಮದುವೆಯಾದ ಮಾರನೇ ದಿನವೇ ಸುಶಿಲಾ ಬಳಿ 50 ಲಕ್ಷ ರೂ.ಗೆ ಬೇಡಿಕೆ ಇಡುತ್ತಾನೆ. ಆತನ ತಂದೆ-ತಾಯಿಯ ಕೂಡ ಬೆಂಬಲ ನೀಡುತ್ತಾರೆ. ತಾನೊಂದು ಮೊಬೈಲ್​ ಶೋರೂಮ್​ ತೆರೆಯಬೇಕಿದೆ. ಅದಕ್ಕಾಗಿ ಹೆಚ್ಚಿನ ಹಣ ಬೇಕಿದ್ದು, ತೆಗೆದುಕೊಂಡು ಬಾ ಎಂದು ಬೆದರಿಕೆ ಹಾಕುತ್ತಾರೆ. ಮದುವೆಯಾಗಿ ಹೊಸ ಕನಸು ಕಂಡಿದ್ದ ಸುಶಿಲಾಗೆ ಗಂಡನ ನಡೆಯಿಂದ ಆಘಾತವಾಗುತ್ತದೆ. ತಕ್ಷಣ ಗಂಡನ ಮನೆ ತೊರೆದು ಅಂಕಲ್​ ಮನೆಗೆ ಬರುತ್ತಾಳೆ.

ಇದಾದ ಕೆಲವೇ ದಿನಗಳಲ್ಲಿ ಮೋಹಿತ್​, ರೋಶಣಿ ಎಂಬಾಕೆಯ ಜತೆ ಓಡಿ ಹೋಗಿರುವ ವಿಚಾರ ಸುಶಿಲಾಗೆ ಮತ್ತೊಂದು ಆಘಾತದಂತೆ ಎರಗುತ್ತದೆ. ಮೊದಲೇ ಸಂಚು ರೂಪಿಸಿದ್ದ ಮೋಹಿತ್​ ತಂದೆ-ತಾಯಿ ಮಗ ನಾಪತ್ತೆಯಾಗಿರುವುದಾಗಿ ದೂರು ನೀಡಿರುತ್ತಾರೆ. ಅಲ್ಲದೆ, ರೋಶಣಿ ತಂದೆ-ತಾಯಿಯು ಸಹ ನಾಪತ್ತೆ ಪ್ರಕರಣವನ್ನು ದಾಖಲಿಸುತ್ತಾರೆ. ಎರಡು ಪ್ರಕರಣಗಳು ರಾಜೇಂದ್ರ ನಗರ ಪೊಲೀಸ್​ ಠಾಣೆಯಲ್ಲಿ ದಾಖಲಾಗಿರುತ್ತದೆ.

ಹೀಗಾಗಿ ಸುಶಿಲಾ ದೂರು ನೀಡಲು ಹೋದರೆ ದೂರು ಸ್ವೀಕರಿಸಿದ ಪೊಲೀಸರು ಈಗಾಗಲೇ ನಾಪತ್ತೆ ಪ್ರಕರಣಗಳು ದಾಖಲಾಗಿವೆ. ನಿಮ್ಮ ಪ್ರಕರಣವನ್ನು ದಾಖಲಿಸಿಕೊಳ್ಳಲು ಆಗುವುದಿಲ್ಲ. ಪತ್ತೆಯಾದ ಬಳಿಕ ದಾಖಲಿಸಿಕೊಳ್ಳುತ್ತೇವೆ. ಒಂದು ವೇಳೆ ಮೋಹಿತ್​ ಗರ್ಲ್​ಫ್ರೆಂಡ್​ ಜತೆ ಓಡಿ ಹೋಗಿದ್ದರೆ, ನನಗೆ ಮೊದಲೇ ಹೇಳಬೇಕಿತ್ತು. ನನ್ನ ಜೀವನವನ್ನೇಕೆ ಹಾಳು ಮಾಡಬೇಕಿತ್ತು ಎಂದು ಸುಶೀಲಾ ಕಣ್ಣೀರಿಟ್ಟರು. ಹಾಗೆಯೇ ಪೊಲೀಸರ ಕ್ರಮವನ್ನು ಟೀಕಿಸಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net