

Parliament Monsoon Session: ಮುಂಗಾರು ಅಧಿವೇಶನದ ಎರಡನೇ ದಿನದಂದು ಸಂಸತ್ತಿನ ಎರಡು ಸದನಗಳಾದ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಮಂಗಳವಾರ (ಜು.22) ಬೆಳಗ್ಗೆ ಕಲಾಪ ಆರಂಭವಾಗುತ್ತಿದ್ದಂತೆ ಭಾರಿ ಗದ್ದಲ ನಡೆಯಿತು.
ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಯ ವಿರುದ್ಧ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸಿ, ಘೋಷಣೆಗಳನ್ನು ಕೂಗಿದ ಹಿನ್ನಲೆಯಲ್ಲಿ ಸದನವನ್ನು ನಾಳೆ (ಜು.23) ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಕಳೆದ ಕೆಲವು ದಿನಗಳಿಂದ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿರುವ ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಸೇರಿದಂತೆ ಹಲವಾರು ವಿಷಯಗಳ ಕುರಿತು ವಿರೋಧ ಪಕ್ಷದ ಸದಸ್ಯರು ಗದ್ದಲ ಎಬ್ಬಿಸಿದ ಕಾರಣ ರಾಜ್ಯಸಭೆಯಲ್ಲಿ ಯಾವುದೇ ಕಲಾಪವನ್ನು ನಡೆಸದೆ, ಒಂದು ದಿನದ ಮಟ್ಟಿಗೆ ಮುಂದೂಡಲಾಯಿತು.
ಈ ವಿಷಯವಾಗಿ ಮಾತನಾಡಿದ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್, ಇದು ಪರಿಷ್ಕರಣೆ ಅಲ್ಲ, ರಾಜಕೀಯ ಕಾರ್ಯಾಚರಣೆಯಾಗಿದೆ. ಇದನ್ನು ದೇಶ್ಯಾದ್ಯಂತ ಮಾಡದೇ ಕೇವಲ ಬಿಹಾರಕ್ಕೆ ಏಕೆ ಸೀಮಿತಗೊಳಿಸಲಾಗಿದೆ ಎಂದು ಧ್ವನಿ ಎತ್ತಿದರು. ಆರ್ಜೆಡಿ ಮತ್ತು ತೃಣಮೂಲ ಕಾಂಗ್ರೆಸ್ ಕೂಡ ಇದೇ ರೀತಿಯ ಅನುಮಾನ ವ್ಯಕ್ತಪಡಿಸಿದ್ದು, ಈ ಅಭಿಯಾನವು ಅಳಿವಿನಂಚಿನಲ್ಲಿರುವ ಸಮುದಾಯಗಳ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಮತ್ತು ಅಲ್ಪಸಂಖ್ಯಾತರ ಪ್ರಾಬಲ್ಯದ ಪ್ರದೇಶಗಳಲ್ಲಿ ಮತದಾರರ ಸಾಮೂಹಿಕ ಅಳಿಸುವಿಕೆಗೆ ಕಾರಣವಾಗಬಹುದು ಎಂದು ಹೇಳಿದೆ.
ದೆಹಲಿ ಹೈಕೋರ್ಟ್ ನ್ಯಾಯಾಧೀಶರಾದ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂವಿಧಾನದ 124, 217 ಮತ್ತು 218ನೇ ವಿಧಿಗಳ ಅಡಿಯಲ್ಲಿ ಯಶವಂತ್ ವರ್ಮಾರನ್ನು ಪದಚ್ಯುತಗೊಳಿಸಲು 145 ಲೋಕಸಭಾ ಸದಸ್ಯರು ಮತ್ತು ರಾಜ್ಯಸಭೆಯಲ್ಲಿ 63 ವಿರೋಧ ಪಕ್ಷದ ಸಂಸದರು ಪ್ರಸ್ತಾವನೆ ಸಲ್ಲಿಸಿದ್ದಾರೆ.(ಏಜೆನ್ಸೀಸ್)