

Rahul Gandhi : 2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಚುನಾವಣೆ ಆಯೋಗದ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡು ಬಿಜೆಪಿ ಗೆದ್ದಿದೆ ಎಂದು ಆರೋಪಿಸಿದ್ದ ರಾಹುಲ್ ಗಾಂಧಿ, ಇದೀಗ ಮಧ್ಯಪ್ರದೇಶದ ಚುನಾವಣೆಯಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆದಿತ್ತು ಎಂದು ಆರೋಪಿಸಿದ್ದಾರೆ.
ಮಧ್ಯಪ್ರದೇಶದ ಮಾಂಡುವಿನಲ್ಲಿ ನಡೆದ ಕಾಂಗ್ರೆಸ್‌ನ ನವ ಸಂಕಲ್ಪ ಶಿಬಿರದಲ್ಲಿ ಕಾನ್ಫರೆನ್ಸ್ ಮೂಲಕ ಭಾಗವಹಿಸಿ ಮಾತನಾಡಿದ ರಾಹುಲ್ ಗಾಂಧಿ ‘ಮಹಾರಾಷ್ಟ್ರ ಚುನಾವಣೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದು, ಮತದಾರರ ಪಟ್ಟಿಯಲ್ಲಿ ನಿಗೂಢವಾಗಿ ಒಂದು ಕೋಟಿಗೂ ಹೆಚ್ಚು ಹೊಸ ಮತದಾರರು ಕಾಣಿಸಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.
ನಾನು ಯಾವುದೇ ಸಂದೇಹವಿಲ್ಲದೆ ಹೇಳುತ್ತೇನೆ, ಮಹಾರಾಷ್ಟ್ರದ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಚುನಾವಣಾ ಆಯೋಗವು ಬಿಜೆಪಿಗೆ ಪೂರ್ಣ ಪ್ರಮಾಣದಲ್ಲಿ ಸಹಾಯ ಮಾಡಿದೆ. ಇದರ ಜೊತೆಗೆ ತಮ್ಮ ಅನುಭವಕ್ಕೆ ಬಂದಂತೆ ಕಳೆದ ಮಧ್ಯ ಪ್ರದೇಶ ಚುನಾವಣೆಯಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದಿದೆ. ಮತಗಳನ್ನ ಒಮ್ಮೆ ಅಲ್ಲ ಪದೇ ಪದೇ ಕದ್ದಿದ್ದಾರೆ. ಈ ವಿಚಾರದಲ್ಲಿ ನೀವು ಜಾಗರೂಕರಾಗಿರಬೇಕೆಂದು ಕಾರ್ಯಕರ್ತರಿಗೆ ರಾಹುಲ್ ಎಚ್ಚರಿಸಿದ್ದಾರೆ.
ದೇಶದಲ್ಲಿ ಹಿಂದುಳಿದ ಮತ್ತು ತಳ ಸಮುದಾಯಗಳ ಮೇಲೆ ವ್ಯವಸ್ಥಿತ ದಬ್ಬಾಳಿಕೆ ನಡೆಯುತ್ತಿದೆ. ಕಾಂಗ್ರೆಸ್ ಪಕ್ಷವು ದೇಶದ 95% ಜನಸಂಖ್ಯೆಯ, ದಲಿತರು, ಆದಿವಾಸಿಗಳು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ವರ್ಗದ ಬಡವರ ಪರ ಹೋರಾಡಬೇಕು. ನಾವು ಅವರ ಧ್ವನಿಯಾಗಬೇಕು. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದರೆ, ತಕ್ಷಣ ಜಾತಿ ಜನಗಣತಿಯನ್ನು ನಡೆಸುತ್ತೇವೆ. ಸರ್ಕಾರಿ ಉದ್ಯೋಗಗಳಲ್ಲಿ ದಲಿತರು, ಆದಿವಾಸಿಗಳು, ಒಬಿಸಿಗಳು ಮತ್ತು ಮಹಿಳೆಯರಿಗೆ ಸಿಗಬೇಕಾದ ಪ್ರಾತಿನಿಧ್ಯವನ್ನು ನೀಡುತ್ತೇವೆ ಎಂದು ಘೋಷಿಸಿದರು.
ಮಧ್ಯಪ್ರದೇಶದ 2023ರ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆದ್ದು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಂಡಿತು. ಕಾಂಗ್ರೆಸ್ ಕೇವಲ 66 ಕ್ಷೇತ್ರಗಳನ್ನು ಗೆದ್ದಿತ್ತು. 2024ರ ಲೋಕಸಭಾ ಚುನಾವಣೆಯಲ್ಲಿ ಮಧ್ಯಪ್ರದೇಶದ ಎಲ್ಲಾ 29 ಸ್ಥಾನಗಳನ್ನು ಬಿಜೆಪಿ ಗೆದ್ದು ಭರ್ಜರಿ ಜಯ ಸಾಧಿಸಿತು.