

Murder: ಇದ್ಯಾವುದೋ ಬಾಲಿವುಡ್, ಸ್ಯಾಂಡಲ್ವುಡ್ ಸಿನಿಮಾ ಕಥೆಯಲ್ಲ, ತನ್ನ ತಾಯಿಯನ್ನ ಅವಮಾನಿಸಿ, ಥಳಿಸಿದ ವ್ಯಕ್ತಿಯನ್ನ ಸುಮಾರು 10 ವರ್ಷಗಳ ಕಾಲ ಲಖನೌದ ಬೀದಿಗಳಲ್ಲಿ ಅಲೆದಾಡಿ ಹುಡುಕಿ ಕೊಲೆ ಮಾಡಿ ಸೇಡು ತೀರಿಸಿಕೊಂಡ ಮಗನ ಪ್ರತೀಕಾರದ ಕತೆ ಇದು.
ಮೇ 22ರಂದು ಲಖನೌದಲ್ಲಿ ಎಳನೀರು ಮಾರಾಟಗಾರ ಮನೋಜ್ ಎಂಬಾತನನ್ನ ರಾಡ್ನಿಂದ ಹೊಡೆದು ಕೊಲೆ ಮಾಡಲಾಗಿತ್ತು. ಪ್ರಕರಣವನ್ನ ಬೇಧಿಸಿರುವ ಪೊಲೀಸರು ಸೋನು ಕಷ್ಯಪ್, ರಂಜಿತ್, ಆದಿಲ್, ಸಲಾಮು ಎಂಬ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
ಕೊಲೆ
ಸುಮಾರು 10 ವರ್ಷಗಳ ಹಿಂದೆ ನಡೆದ ಜಗಳವೊಂದರಲ್ಲಿ ಕೊಲೆಯಾದ ಮನೋಜ್, ಸೋನು ಕಷ್ಯಪ್ನ ತಾಯಿಯನ್ನು ಥಳಿಸಿ ಅಲ್ಲಿಂದ ಪರಾರಿಯಾಗಿದ್ದ. ತನ್ನ ತಾಯಿಗೆ ಆದ ಅವಮಾನದಿಂದ ಕೋಪಗೊಂಡಿದ್ದ ಸೋನು, ಮನೋಜ್ನನ್ನ ಹುಡುಕಲು ಆರಂಭಿಸಿದ. ಆದರೆ, ಸಮಯ ಕಳೆಯುತ್ತಿತ್ತು. ಆದರೂ ಆತನ ತನ್ನ ಪ್ರಯತ್ನ ಬಿಡಲಿಲ್ಲ. ಸುಮಾರು ಮೂರು ತಿಂಗಳ ಹಿಂದೆ, ಸೋನು ಕೊನೆಗೂ ಮನೋಜ್ನನ್ನ ನಗರದ ಮುನ್ಶಿ ಪುಲಿಯಾ ಪ್ರದೇಶದಲ್ಲಿ ಇರುವುದನ್ನ ಪತ್ತೆ ಹಚ್ಚಿದನು. ಬಳಿಕ ಆತನ ಮೇಲೆ ಸೇಡು ತೀರಿಸಿಕೊಳ್ಳಲು ಸಂಚು ರೂಪಿಸಿದ.
ಮನೋಜ್‌ನ ದೈನಂದಿನ ದಿನಚರಿಯನ್ನ ಗಮನಿಸಿ ಅವನನ್ನು ಕೊಲ್ಲಲು ಪ್ಲಾನ್ ಮಾಡಿದನು. ಕೊಲೆಯ ಸಂಚಿನಲ್ಲಿ ತನ್ನ ನಾಲ್ವರು ಸ್ನೇಹಿತರನ್ನು ಸೇರಿಸಿಕೊಂಡು, ಕೊಲೆಯ ಬಳಿಕ ಅವರಿಗೆ ಪಾರ್ಟಿ ನೀಡುವುದಾಗಿ ಭರವಸೆ ನೀಡಿದನು. ಮೇ 22 ರಂದು, ಮನೋಜ್ ತನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊರಡುವಾಗ ನಾಲ್ವರು ದಾಳಿ ಮಾಡಿ ರಾಡ್ನಿಂದ ಭೀಕರವಾಗಿ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮನೋಜ್ ಮೃತಪಟ್ಟನು.
ಪಾರ್ಟಿ ಮಾಡುವ ಫೋಟೋ
ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬೆನ್ನತ್ತಿದ್ದ ಪೊಲೀಸರಿಗೆ ಎಲ್ಲಿಯೂ, ಯಾವುದೇ ಸುಳಿವು ಸಿಕ್ಕಿರಲಿಲ್ಲ. ಆರೋಪಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದರೂ, ಪೊಲೀಸರಿಗೆ ಮಾತ್ರ ಎಲ್ಲಿಯೂ ಪತ್ತೆಯಾಗಲಿಲ್ಲ. ಏತನ್ಮಧ್ಯೆ, ಕೊಲೆ ನಡೆದ ನಂತರ, ಸೋನು ತನ್ನ ಸ್ನೇಹಿತರಿಗಾಗಿ ಅದ್ಧೂರಿ ಮದ್ಯದ ಪಾರ್ಟಿಯನ್ನು ಏರ್ಪಡಿಸಿದನು. ಪಾರ್ಟಿಯಲ್ಲಿ ಸಿಕ್ಕಾಪಟ್ಟೆ ಎಣ್ಣೆ ಹೊಡೆದು ಪಾರ್ಟಿ ಮಾಡಿದ ಫೋಟೋಗಳನ್ನ ಆರೋಪಿಗಳು ತಮ್ಮ ಸಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಆರೋಪಿಗಳನ್ನ ಪತ್ತೆ ಹಚ್ಚಲು ಪೊಲೀಸರಿಗೆ ಸಹಾಯ ಮಾಡಿದವು.
ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬರುವ ಐದು ಶಂಕಿತರಲ್ಲಿ ಒಬ್ಬನನ್ನು ಸಾಮಾಜಿಕ ಮಾಧ್ಯಮದ ಫೋಟೋಗಳಲ್ಲಿ ಗುರುತಿಸಲಾಗಿದೆ. ಕೊಲೆಯ ಸಮಯದಲ್ಲಿ ಅವನು ಧರಿಸಿದ್ದ ಕಿತ್ತಳೆ ಬಣ್ಣದ ಟೀ ಶರ್ಟ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಧರಿಸಿರುವುದು ಕಂಡುಬಂದಿದೆ. ನಂತರ ಪೊಲೀಸರು ಎಲ್ಲಾ ಐವರು ಶಂಕಿತರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದ್ದು, ಐವರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.(ಏಜೆನ್ಸೀಸ್)