More

  ನಕಲಿ ರೈತರಿಗೆ ಬೋನಫೈಡ್ ಸರ್ಟಿಫಿಕೇಟ್; ತೆರಿಗೆ ವಂಚಿಸಲು ಕೃಷಿಕರ ಹೆಸರಲ್ಲಿ ನೋಂದಣಿ

  ಕೀರ್ತಿನಾರಾಯಣ ಸಿ.

  ಬೆಂಗಳೂರು: ಯಾರದ್ದೋ ಕೃಷಿ ಜಮೀನಿಗೆ ಇನ್ಯಾರೋ ನಕಲಿ ‘ಬೋನಫೈಡ್ ಸರ್ಟಿಫಿಕೇಟ್’ಗಳನ್ನು ಸೃಷ್ಟಿಸಿಕೊಳ್ಳು ತ್ತಿರುವ ಬಹುದೊಡ್ಡ ಹಗರಣ ರಾಜ್ಯದಲ್ಲಿ ಬೆಳಕಿಗೆ ಬಂದಿದೆ. ಈ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನೇ ಸಲ್ಲಿಸಿ ಟ್ರ್ಯಾಕ್ಟರ್, ಟ್ರಾಲಿ ಹಾಗೂ ಇನ್ನಿತರ ಯಂತ್ರೋಪಕರಣಗಳ ಖರೀದಿಗೆ ಬ್ಯಾಂಕ್​ಗಳಿಂದ ಸಾಲ ಪಡೆಯಲಾಗಿದೆ. ಕೃಷಿ ಬಳಕೆಯ ಹೆಸರಿನಲ್ಲಿ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (ಆರ್​ಟಿಒ) ನೋಂದಣಿ ಮಾಡಿಸುವ ಮೂಲಕ ಬೊಕ್ಕಸಕ್ಕೆ ಕೋಟ್ಯಂತರ ರೂ. ರಸ್ತೆ ತೆರಿಗೆ ವಂಚಿಸಲಾಗಿದೆ.

  ಕೃಷಿ ಬಳಕೆಯ ವಾಹನವಾದರೆ ರಸ್ತೆ ತೆರಿಗೆ (ವೈಟ್​ಬೋರ್ಡ್) ಬರೀ 1500 ರೂ. ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ, ಕೃಷಿಕರಲ್ಲದವರು ಖರೀದಿಸಿದರೆ ವಾಣಿಜ್ಯ ವಾಹನ (ಯೆಲ್ಲೋ ಬೋರ್ಡ್) ವ್ಯಾಪ್ತಿಗೆ ಬರುತ್ತದೆ. ನೋಂದಣಿ ಸಂದರ್ಭದಲ್ಲಿ 3 ರಿಂದ 5 ಲಕ್ಷ ರೂ. ಪಾವತಿಸಬೇಕಾಗುತ್ತದೆ. ಜತೆಗೆ 3 ತಿಂಗಳಿಗೊಮ್ಮೆ ರಸ್ತೆ ತೆರಿಗೆ ಕಟ್ಟಬೇಕಾಗುತ್ತದೆ. ರಸ್ತೆ ತೆರಿಗೆ ಪಾವತಿ ವಂಚಿಸುವ ಉದ್ದೇಶದಿಂದ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನು ಸೃಷ್ಟಿಸಿಕೊಂಡು, ವ್ಯವಸಾಯಗಾರ ಎಂಬ ಸೋಗಿನಲ್ಲಿ ಬ್ಯಾಂಕ್ ಸಾಲ ಪಡೆದು ವಾಹನಗಳನ್ನು ಖರೀದಿ ಮಾಡಿ, ನೋಂದಣಿ ಮಾಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಗೌರಿಬಿದನೂರು, ಶಿಡ್ಲಘಟ್ಟ, ಬಾಗೇಪಲ್ಲಿ ಸೇರಿ ಬೇರೆಬೇರೆ ತಾಲೂಕಿನ ವ್ಯಕ್ತಿಗಳಿಗೆ ಕೋಲಾರ ಜಿಲ್ಲೆ ನರಸಾಪುರ ಹೋಬಳಿ ನಾಡಕಚೇರಿಯಲ್ಲಿ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನು ಮಾಡಿಕೊಡಲಾಗಿದೆ.

  ಕೋಲಾರ, ಚಿಕ್ಕಬಳ್ಳಾಪುರ, ಚಿಂತಾಮಣಿ ಹಾಗೂ ಕೆಜಿಎಫ್ ಆರ್​ಟಿಒಗಳಲ್ಲಿ ಅಕ್ರಮವಾಗಿ ವಾಹನಗಳನ್ನು ನೋಂದಣಿ ಮಾಡಿಕೊಡಲಾಗಿದೆ. ಆರ್​ಟಿಒ ಅಧಿಕಾರಿಗಳು, ನಾಡಕಚೇರಿ ಸಿಬ್ಬಂದಿ ಅಕ್ರಮದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಈ ಸಂಬಂಧ ಕೋಲಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಶೀಲನೆಗಾಗಿ ಕಂದಾಯ ಇಲಾಖೆಗೆ ಕಳುಹಿಸಲಾಗಿದೆ.

  2022-23ರ ಅವಧಿಯಲ್ಲೇ ಸಾವಿರಾರು ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನು ವಿತರಿಸಲಾಗಿದೆ. ಬರೀ 2 ತಿಂಗಳಲ್ಲಿ 500ಕ್ಕೂ ಹೆಚ್ಚು ಟ್ರಾ್ಯಕ್ಟರ್ ಇನ್ನಿತರ ಯಂತ್ರೋಪಕರಣಗಳು ಕೃಷಿಕರ ಹೆಸರಿನಲ್ಲಿ ನೋಂದಣಿಯಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಯಾವ ಜಿಲ್ಲೆ, ಯಾವೆಲ್ಲ ಗ್ರಾಮ, ಸರ್ವೆ ನಂಬರ್​ಗಳು, ಮೂಲ ಮಾಲೀಕರ್ಯಾರು, ಯಾರ ಹೆಸರಿಗೆ ನಕಲಿ ಬೋನಫೈಡ್ ಸರ್ಟಿಫೀಕೇಟ್ ಹಾಗೂ ವಾಹನ ನೋಂದಣಿ ಸಂಖ್ಯೆಸಮೇತ ಸಂಪೂರ್ಣ ದಾಖಲಾತಿಗಳು ಪೊಲೀಸರಿಗೆ ಲಭ್ಯವಾಗಿವೆ.

  ಅಕ್ರಮದಲ್ಲಿ ಆರ್​ಟಿಒಗಳು ಶಾಮೀಲು?

  • ಆನ್​ಲೈನ್​ನಲ್ಲಿ ಬರುವ ಬೋನಫೈಡ್​ಸರ್ಟಿಫಿಕೇಟ್ ಅಸಲಿಯೋ ನಕಲಿಯೋ ಪರಿಶೀಲಿಸಬೇಕು.
  • ಸರ್ಟಿಫಿಕೇಟ್​ನ ಜತೆ ಪಹಣಿ ಸಲ್ಲಿಸಿರಬೇಕು. ಎರಡರಲ್ಲಿನ ಮಾಹಿತಿಯ ಅಸಲಿತನ ನೋಡಬೇಕು.
  • ಒಂದು ವೇಳೆ ಪಹಣಿ ಸಲ್ಲಿಸಿರದಿದ್ದರೆ ವಾಹನದ ನೋಂದಣಿ ಪ್ರಕ್ರಿಯೆಯನ್ನು ತಿರಸ್ಕರಿಸಬೇಕು.
  • ಒಂದು ಟ್ರ್ಯಾಕ್ಟರ್​ಗೆ 80 ರಿಂದ 90 ಸಾವಿರ ರೂ. ಪಡೆದು ನೋಂದಣಿ ಮಾಡಿರುವ ಆರೋಪ.

  ನಾಡಕಚೇರಿಯಲ್ಲೇ ಅಕ್ರಮ

  • ನಾಡಕಚೇರಿ ಉಪ ತಹಶೀಲ್ದಾರ್, ಗಣಕಯಂತ್ರ ನಿರ್ವಾಹಕರಿಂದ ನಕಲಿ ಪ್ರಮಾಣಪತ್ರಗಳ ವಿತರಣೆ.
  • ಬೋನಫೈಡ್ ಸರ್ಟಿಫಿಕೇಟ್ ವಿತರಣೆ ಮುನ್ನ ಆಧಾರ್ ಕಾರ್ಡ್, ವೋಟರ್ ಐಡಿ ಪರಿಶೀಲಿಸಬೇಕು.
  • ಲಂಚ ಪಡೆದು ಯಾರದ್ದೋ ಜಮೀನಿಗೆ ಇನ್ಯಾರಿಗೋ ಸರ್ಟಿಫಿಕೇಟ್ ವಿತರಣೆ
  • ರಸ್ತೆ ತೆರಿಗೆ, ವಿಮಾ ಶುಲ್ಕ ವಿನಾಯಿತಿ, ಸಾಲ ಸಬ್ಸಿಡಿ ಸೇರಿ ಇನ್ನಿತರ ಸೌಲಭ್ಯಕ್ಕಾಗಿ ಅಕ್ರಮ

  ಯಾವ್ಯಾವ ಆರ್​ಟಿಒಗಳಲ್ಲಿ ನೋಂದಣಿ?

  • ಕೋಲಾರ, ಚಿಕ್ಕಬಳ್ಳಾಪುರ,
  • ಚಿಂತಾಮಣಿ ಹಾಗೂ ಕೆಜಿಎಫ್

  ವಂಚನೆ ಹೇಗೆ?

  • ಕೃಷಿ ಭೂಮಿ ಮೂಲ ಮಾಲೀಕರ ಬದಲಿಗೆ ಬೇರೆ ಹೆಸರಿನಲ್ಲಿ ಬೋನಫೈಡ್ ಪ್ರಮಾಣಪತ್ರ.
  • ಕೆಲ ಗ್ರಾಮಗಳಲ್ಲಿರುವ ಸರ್ಕಾರಿ ಖರಾಬ್ ಭೂಮಿಯ ಹೆಸರಿಗೂ ಪ್ರಮಾಣಪತ್ರ.
  • ಲಂಚ ಪಡೆದು ನಕಲಿ ದೃಢೀಕರಣ ಪತ್ರ ಮಾಡಿಕೊಟ್ಟ ನಾಡಕಚೇರಿ ಸಿಬ್ಬಂದಿ.
  • ಬೆಂ.ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆ ವ್ಯಕ್ತಿಗಳ ಹೆಸರಿಗೆ ಪತ್ರ ವಿತರಣೆ.
  • ಆನ್​ಲೈನ್​ನಲ್ಲಿ ನಕಲಿ ಬೋನಫೈಡ್ ಪತ್ರ ಸಲ್ಲಿಸಿ ಟ್ರಾ್ಯಕ್ಟರ್ ಖರೀದಿಗೆ ಬ್ಯಾಂಕ್ ಸಾಲ.
  • ನಕಲಿ ದಾಖಲೆ ಸಲ್ಲಿಸಿ ಕೃಷಿಕ ಎಂದು ಬಿಂಬಿಸಿಕೊಂಡು ವಾಹನಗಳ ನೋಂದಣಿ.

  ಏನಿದು ಬೋನಫೈಡ್ ಸರ್ಟಿಫಿಕೇಟ್?

  ಕೃಷಿ ಭೂಮಿಯಲ್ಲಿ ವ್ಯವಸಾಯ ಮಾಡುತ್ತಿದ್ದಾನೆಂದು ಮೂಲ ಮಾಲೀಕನ ಹೆಸರಲ್ಲಿ ಉಪ ತಹಶೀಲ್ದಾರ್, ಬೋನಫೈಡ್ (ಕಾನೂನಾತ್ಮಕ ದೃಢೀಕೃತ ಪ್ರಮಾಣಪತ್ರ) ಸರ್ಟಿಫಿಕೇಟ್ ಕೊಡಲಾಗುತ್ತದೆ. ಈ ಸರ್ಟಿಫಿಕೇಟ್​ನಿಂದ ಸಾಲ ಸೌಲಭ್ಯ, ಸಬ್ಸಿಡಿ, ವಾಹನ ಖರೀದಿ ಸೇರಿ ಕೃಷಿಕರಿಗಿರುವ ಇನ್ನಿತರ ಸರ್ಕಾರಿ ಸೌಲಭ್ಯ ಪಡೆಯಲು ಸಹಕಾರಿಯಾಗುತ್ತದೆ.

  ಕೃಷ್ಣ ಬೈರೇಗೌಡ ಜಮೀನಿಗೂ ನಕಲಿ ಪತ್ರ

  ಕೋಲಾರ ಜಿಲ್ಲೆ ಗರುಡಪಾಳ್ಯದಲ್ಲಿ ಮಾಜಿ ಸಚಿವ ಕೃಷ್ಣ ಬೈರೇಗೌಡ ಹೊಂದಿರುವ ಜಮೀನುಗಳ ಸರ್ವೆ ನಂಬರ್ ಬಳಸಿ ಐವರು ವ್ಯಕ್ತಿಗಳಿಗೆ ನಕಲಿ ಬೋನಫೈಡ್ ಸರ್ಟಿಫಿಕೇಟ್​ಗಳನ್ನು ವಿತರಣೆ ಮಾಡಲಾಗಿದೆ. ಕೋಲಾರ ತಾಲೂಕಿನ ಬೇರೆಬೇರೆ ಗ್ರಾಮಗಳ ಸರ್ವೆ ನಂಬರ್​ಗಳಲ್ಲಿ ನಕಲಿ ದೃಢೀಕೃತ ಪ್ರಮಾಣಪತ್ರಗಳನ್ನು ವಿತರಿಸಿರುವುದು ದೂರಿನಲ್ಲಿ ಉಲ್ಲೇಖ.

  ಮೂಲ ಮಾಲೀಕರ ಹೆಸರಲ್ಲಿರುವ ಜಮೀನಿಗೆ ಬೇರೆಬೇರೆ ವ್ಯಕ್ತಿಗಳ ಹೆಸರಲ್ಲಿ ನಕಲಿ ಬೋನಫೈಡ್ ಸರ್ಟಿಫಿಕೇಟ್​ವಿತರಿಸಿರುವ ದೂರು ಬಂದಿದೆ. ದೂರುದಾರರು ಸಲ್ಲಿಸಿರುವ ದಾಖಲಾತಿ ಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಕಳುಹಿಸಿದ್ದು, ಅವರ ಪರಿಶೀಲನೆ ಬಳಿಕ ತನಿಖೆ ಕೈಗೊಳ್ಳಲಾಗುತ್ತದೆ.

  | ಎಂ.ನಾರಾಯಣ
  ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

  ರಾಜ್ಯೋತ್ಸವ ರಸಪ್ರಶ್ನೆ - 20

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts