

ಬೆಂಗಳೂರು: ಒಮ್ಮೊಮ್ಮೆ ಸುಳಿವೇ ಇರದಂತೆ ಕೆಲ ಸಿನಿಮಾಗಳು ಪ್ರೇಕ್ಷಕರನ್ನು ಸಂಪೂರ್ಣವಾಗಿ ಸೆಳೆದು ಬಿಡುವುದಿದೆ. ಇದೀಗ ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ 'ಡ್ಯಾಡ್' ಚಿತ್ರದ ಟೀಸರ್ ಕೂಡಾ ನೋಡುಗರನ್ನು ಅದೇ ರೀತಿ ಚಕಿತಗೊಳಿಸಿದೆ.
ಇಂಥದ್ದೊಂದು ಟೀಸರ್ ಅನ್ನು ಸದ್ದಿಲ್ಲದೆ ಪ್ರೇಕ್ಷಕರ ಮುಂದಿಟ್ಟಿರೋದು ಹೊಸಬರ ತಂಡ ಎಂಬುದು ನಿಜಕ್ಕೂ ವಿಶೇಷ. ಗಮನೀಯ ಅಂಶವೆಂದರೆ, ಈ ಟೀಸರ್ ಈಗ ರಾಜ್ಯ ಗಡಿ ದಾಟಿ, ಎಲ್ಲೆಡೆ ಪಸರಿಸಿಕೊಂಡಿದೆ. ಬಾಲಿವುಡ್ ನಿರ್ದೇಶಕ, ನಿರ್ಮಾಪಕ, ನಟ ಸುಭಾಶ್ ಘಾಯ್ ಫಿದಾ ಆಗಿದ್ದಾರೆ. 'ಡ್ಯಾಡ್' ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಅಂದಹಾಗೆ, ದೇವರಾಜ್ ಅಲಿಯಾಸ್ ದೇವಿಡ್ ಎಂಬುದು ಡ್ಯಾಡ್ ಎಂಬುದರ ವಿಸ್ತೃತ ರೂಪವಂತೆ. ಕೇವಲ ಡ್ಯಾಡ್ ಎಂಬ ಪದವೂ ಕೂಡ ಸಿನಿಮಾ ಕಂಟೆಂಟಿಗೆ ಅನ್ವರ್ಥವಾಗಿದೆಯಂತೆ. ಈ ಬಗ್ಗೆ ಸದರಿ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಅರ್ಜುನ್ ಕೃಷ್ಣ ಒಂದಷ್ಟು ಇಂಟರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ಎರಡು ಮುಖಗಳಿರುತ್ತವೆ. ಹೆಚ್ಚಾಗಿ ಈ ಸಮಾಜದೆದುರು ಒಂದು ಮುಖ ಮಾತ್ರವೇ ಕಾಣಿಸಿಕೊಳ್ಳುತ್ತದೆ. ಆದರೆ ಓರ್ವ ಸಾಮಾನ್ಯ ಮನುಷ್ಯನನ್ನು ಪದೇ ಪದೇ ಕಷ್ಟಗಳು ಮುತ್ತಿಕೊಂಡರೆ, ದುಷ್ಟ ಶಕ್ತಿಗಳು ಕಾಡಿದರೆ, ನ್ಯಾಯವೆಂಬುದು ಮರೀಚಿಕೆಯಾದರೆ, ತಂತಾನೇ ಎರಡನೇ ಮುಖದ ಅನಾವರಣಗೊಳ್ಳುತ್ತದೆ. ಇದು ಪಕ್ಕಾ ಕಮರ್ಶಿಯಲ್ ಬಗೆಯ ಚಿತ್ರ. ಆದರೆ ರಿಯಲಿಸ್ಟಿಕ್ ಮೇಕಿಂಗಿನತ್ತ ಹೆಚ್ಚು ಒತ್ತು ಕೊಡಲಾಗಿದೆಯಂತೆ.
ಎಂಬಿಎ ಮುಗಿಸಿಕೊಂಡು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಿದ್ದ ಅರ್ಜುನ್ ಕೃಷ್ಣ ಈ ಚಿತ್ರವನ್ನು ನಿರ್ಮಾಣ ಮಾಡಿದ್ದು, ನಿರ್ದೇಶನದ ಜವಾಬನ್ದಾರಿಯನ್ನೂ ನಿಭಾಯಿಸಿದ್ದಾರೆ. ಕುಂದಾಪುರ ಮೂಲದ ವಿಶಾಲ್ ರಾಘವ್ ನಾಯಕನಾಗಿ ನಟಿಸಿದ್ದರೆ, ನೃತ್ಯ ಬೋಪಣ್ಣ ಮತ್ತು ಮಹಿಕಾ ನಾಯಕಿಯರಾಗಿ ಸಾಥ್ ಕೊಟ್ಟಿದ್ದಾರೆ.
ಈಗಾಗಲೇ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿರುವ ಡ್ಯಾಡ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಕೂಡ ಅಂತಿಮ ಹಂತದಲ್ಲಿದೆ. ಈ ಚಿತ್ರದಲ್ಲಿ ಹೊಸಬರಿಗೆ ಹೆಚ್ಚು ಪ್ರಧಾನ್ಯತೆ ಕೊಡಲಾಗಿದೆ. ಸುಚೇಂದ್ರ ಪ್ರಸಾದ್, ಸಿದ್ಲಿಂಗು ಶ್ರೀಧರ್, ಅರುಣಾ ಬಾಲರಾಜ್ ಮುಂತಾದವರ ತಾರಾಗಣವಿದೆ.
ಶಿವಹರಿ ವರ್ಮಾ ಹಿನ್ನೆಲೆ ಸಂಗೀತ, ಮುಂಬೈ ಮೂಲದ ಆಕಾಶ್ ಸೇಠ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ಸಂಕಲನ ಮತ್ತು ಛಾಯಾಗ್ರಹಣದ ಜವಾಬ್ದಾರಿಯನ್ನು ಅನಿಲ್ ಕುಮಾರ್.ಕೆ ನಿಭಾಯಿಸಿದ್ದಾರೆ.