ಬೆಳ್ತಂಗಡಿ : ತಂದೆ ಮತ್ತು ಮಗಳು ಸಂಚರಿಸುತ್ತಿದ್ದ ಬೈಕ್‌ಗೆ ಬೊಲೆರೊ ವಾಹನ ಹಿಂಬದಿಯಿಂದ ಡಿಕ್ಕಿ ಹೊಡೆದು ಬಾಲಕಿ ಸಾವನ್ನಪ್ಪಿ ತಂದೆ ಗಂಭೀರ ಗಾಯಗೊಂಡ ಪ್ರಕರಣ ಮುಂಡಾಜೆಯಲ್ಲಿ ಶನಿವಾರ ನಡೆದಿದೆ.
ತಂದೆ ಗುರುಪ್ರಸಾದ್ ಗೋಖಲೆ ಮತ್ತು ಉಜಿರೆ ಖಾಸಗಿ ಆಂಗ್ಲ ಮಾಧ್ಯಮ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಅನರ್ಘ್ಯ(12) ಉಜಿರೆಯಿಂದ ಕಲ್ಮಂಜ ಗ್ರಾಮದ ಕುಡೆಂಚಿಯ ಮೂಲ ಮನೆಗೆ ಬರುತ್ತಿದ್ದ ಸಂದರ್ಭ ರಾಷ್ಟ್ರೀಯ ಹೆದ್ದಾರಿಯ ಮುಂಡಾಜೆಯ ಸೀಟಿನ ಬಳಿ ಬೊಲೆರೊ ಹಿಂಬದಿಯಿಂದ ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದೆ. ಗಂಭೀರ ಗಾಯಗೊಂಡಿದ್ದ ಬಾಲಕಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾಳೆ. ತಂದೆ ಗುರುಪ್ರಸಾದ್ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನೆರಿಯ ಕಡೆಯ ಬೊಲೆರೊ ವಾಹನ ಅಪಘಾತದ ಬಳಿಕ ಸೀಟು-ಕಾಯರ್ತೋಡಿ ರಸ್ತೆಯತ್ತ ಪರಾರಿಯಾಗಿದ್ದು, ಈ ವಿಚಾರ ತಿಳಿದಿದ್ದ ಊರವರು ಹಾಗೂ ವಿದ್ಯುತ್ ಲೈನ್ ಕೆಲಸ ಮಾಡುತ್ತಿದ್ದವರು ವಾಹನವನ್ನು ತಡೆದು ನಿಲ್ಲಿಸಿ ವಾಹನ ಹಾಗೂ ಅದರಲ್ಲಿದ್ದ ಮಂದಿಯನ್ನು ಬೆಳ್ತಂಗಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.