ಗ್ರಾಮದ ಬಳಿಯಿರುವ ಅರಣ್ಯದಲ್ಲಿ ನಿಗೂಢವಾಗಿ ಸಿಕ್ಕ ಸೂಟ್​ಕೇಸ್​ ತೆರೆದ ಪೊಲೀಸರಿಗೆ ಕಾದಿತ್ತು ಶಾಕ್​!

Odisha Police
Published on

ಭುವನೇಶ್ವರ: ಒಡಿಶಾದ ಗ್ರಾಮವೊಂದರ ಸಮೀಪದ ಅರಣ್ಯದಲ್ಲಿ ಅನಾಥವಾಗಿ ಬಿದ್ದಿದ್ದ ಸೂಟ್​ಕೇಸ್ ತೆರೆದ ಪೊಲೀಸರು ಅದರಲ್ಲಿದ್ದ ವ್ಯಕ್ತಿಯೊಬ್ಬನ ಶವವನ್ನು ಕಂಡು ಶಾಕ್​ ಆಗಿದ್ದಾರೆ. ಈ ಘಟನೆ ಖೋರ್ಧಾ ಜಿಲ್ಲೆಯ ನಚುನಿ ಪೊಲೀಸ್​ ಠಾಣಾ ವ್ಯಾಪ್ತಿಯ ಹರಿಪುರ ಗ್ರಾಮದ ಸಮೀಪ ಇರುವ ಅರಣ್ಯದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಮನೋರಂಜನ್​ ಮೋಹಪಾತ್ರ (32) ಎಂದು ಗುರುತಿಸಲಾಗಿದೆ. ಆತ ರಣಪುರ್ ಬ್ಲಾಕ್ ಅಡಿಯಲ್ಲಿ ಬರುವ ಬಲಭದ್ರಪುರ ಪಂಚಾಯತ್‌ನ ಲಖಪದ ಗ್ರಾಮದ ಗಂಗಾಧರ್ ಅವರ ಪುತ್ರ. ಉರುವಲು ಸಂಗ್ರಹಿಸಲು ಕಾಡಿಗೆ ತೆರಳಿದ್ದ ವೇಳೆ ನಿಗೂಢ ಸ್ಥಿತಿಯಲ್ಲಿ ಬಿದ್ದಿದ್ದ ಸೂಟ್‌ಕೇಸ್‌ನ್ನು ಕೆಲ ಸ್ಥಳೀಯರು ಗಮನಿಸಿ, ಪೊಲೀಸರಿಗೆ ಮಾಹಿತಿ ತಿಳಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅರಣ್ಯವು ಜಿಲ್ಲೆಯ NH-16ರ ಪಕ್ಕದಲ್ಲಿರುವ ತಾರಿಣಿ ದೇವಸ್ಥಾನದ ಬಳಿ ಇದೆ. ಮಾಹಿತಿ ತಿಳಿದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಸೂಟ್‌ಕೇಸ್‌ ಒಡೆದು ನೋಡಿದಾಗ ಅದರಲ್ಲಿ ಶವ ಪತ್ತೆಯಾಗಿದೆ.

ಘಟನೆ ಸಂಬಂಧ ನಾಚುಣಿ ಪೊಲೀಸರು ಮೃತದೇಹವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಾವಿನ ರಹಸ್ಯ ಭೇದಿಸಲು ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ಸಾಕ್ಷ್ಯಾಧಾರಗಳ ಪ್ರಕಾರ ಇದು ಕೊಲೆ ಎಂದು ಶಂಕಿಸಲಾಗಿದೆ. ಆದರೆ, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಅಧಿಕೃತ ವಿಷಯ ತಿಳಿಯಲಿದೆ ಎಂದು ಬಲುಗಾಂವ್ ಎಸ್‌ಡಿಪಿಒ ಮಾನಸ್ ರಂಜನ್ ಬಾರಿಕ್ ಮಾಹಿತಿ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net