

ಉತ್ತರಪ್ರದೇಶ: ದೇಶದಲ್ಲಿ ಯುವತಿಯೊಬ್ಬಳನ್ನು ಕೊಂದು ತುಂಡುತುಂಡಾಗಿ ಕತ್ತರಿಸಿದ ಪ್ರಕರಣ ಇನ್ನೂ ಹಸಿಯಾಗಿರುವಾಗಲೇ ಮತ್ತೊಂದು ಕ್ರೂರ ಹಾಗೂ ಪೈಶಾಚಿಕ ಕೃತ್ಯವೊಂದು ನಡೆದಿದೆ. ವ್ಯಕ್ತಿಯೊಬ್ಬರಿಗೆ ಮಗ ಅಪಘಾತದಲ್ಲಿ ಮೃತನಾಗಿದ್ದಕ್ಕೆ ಸರ್ಕಾರದಿಂದ ಬಂದಿದ್ದ ಪರಿಹಾರ ಧನದ ಮೇಲೆ ಕಣ್ಣಿಟ್ಟ ದುಷ್ಕರ್ಮಿಗಳು ಅವರ ಮೊಮ್ಮಗಳನ್ನು ಅಪಹರಿಸಿ, ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾತ್ರವಲ್ಲ, ಬಳಿಕ ಆಕೆಯನ್ನು ಕೊಂದು ಶವ ಎಸೆದಿದ್ದರು.
ಉತ್ತರಪ್ರದೇಶದ ಗಾಜಿಯಾಬಾದ್ನ ಬುಲಂದ್ಷಹರ್ನಲ್ಲಿ ಈ ಪ್ರಕರಣ ನಡೆದಿದೆ. ಇಲ್ಲಿನ ಸೋನು ಎಂಬವರ 12 ವರ್ಷದ ಪುತ್ರಿ ಖುಷಿಯನ್ನು ದುಷ್ಕರ್ಮಿಗಳು ಅಪಹರಿಸಿ ಕೊಂದು, ಬಳಿಕ ಶವವನ್ನು ಗ್ರಾಮದಲ್ಲಿ ಎಸೆದಿದ್ದರು. ಮೂರು ದಿನಗಳ ಹಿಂದೆ ಇಲ್ಲಿನ ನಂದಿಗ್ರಾಮ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಖುಷಿ ಅಪಹರಣದ ಪ್ರಕರಣ ದಾಖಲಾಗಿತ್ತು. ಅಪಹರಣಕಾರರು ಬಾಲಕಿಯ ತಂದೆ ಸೋನುಗೆ ಭಾನುವಾರ ಕರೆ ಮಾಡಿ 30 ಲಕ್ಷ ರೂ. ನೀಡುವಂತೆ ಬೇಡಿಕೆ ಇರಿಸಿದ್ದರು. ಬಳಿಕ ಸೋನು ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ತನಿಖೆಗೆ ಮುಂದಾದ ಪೊಲೀಸರು ಬಾಲಕಿ ನೆಲೆಸಿದ್ದ ಅಜ್ಜ-ಅಜ್ಜಿಯ ಮನೆ ಬಳಿಯ ವ್ಯಕ್ತಿ ಸೇರಿದಂತೆ ಮೂವರನ್ನು ಅನುಮಾನದ ಮೇರೆಗೆ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಆಗ ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಬಾಲಕಿಯನ್ನು ಕೊಂದು ಶವ ಎಸೆದಿದ್ದಾಗಿ ತಿಳಿಸಿದ್ದರು. ಆರೋಪಿಗಳು ವಿಚಾರಣೆ ವೇಳೆ ನೀಡಿದ್ದ ಮಾಹಿತಿ ಮೇರೆಗೆ ಪೊಲೀಸರು ಬುಲಂದ್ಷಹರ್ನ ಕೊತ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಸರಯ್ ಛಾಬಿಲಾ ಗ್ರಾಮದ ಹೊಲವೊಂದರಲ್ಲಿ ಶವವನ್ನು ಪತ್ತೆ ಮಾಡಿದ್ದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಆ ಬಳಿಕವಷ್ಟೇ ಕೊಲೆ ಕುರಿತ ಹೆಚ್ಚಿನ ಮಾಹಿತಿ ದೃಢಪಡಲಿದೆ.
ಕೊಲೆಯಾದ ಬಾಲಕಿಯ ಅಜ್ಜ-ಅಜ್ಜಿಗೆ ತಮ್ಮ ಹಿರಿಯ ಮಗ ಇತ್ತೀಚೆಗೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಕ್ಕೆ ಸರ್ಕಾರದಿಂದ 30 ಲಕ್ಷ ರೂ. ಪರಿಹಾರ ಬಂದಿತ್ತು. ಈ ವಿಷಯ ಗೊತ್ತಾಗಿ ಆ ಹಣದ ಮೇಲೆ ಕಣ್ಣಿಟ್ಟ ದುಷ್ಕರ್ಮಿಗಳು ಅವರ ಮೊಮ್ಮಗಳನ್ನು ಅಪಹರಿಸಿ, ಆಕೆಯ ತಂದೆಗೆ ಕರೆ ಮಾಡಿ 30 ಲಕ್ಷ ರೂ. ಒತ್ತೆಹಣಕ್ಕೆ ಬೇಡಿಕೆ ಇಟ್ಟಿದ್ದರು.