

ಮುಂಬೈ: ರುಂಡವಿಲ್ಲದ ಅಪರಿಚಿತ ಮಹಿಳೆಯ ಶವ ಟ್ರಾವೆಲ್ ಬ್ಯಾಗ್‌ನಲ್ಲಿ ಪತ್ತೆಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ಇಂದು ಬೆಳಿಗ್ಗೆ 8.30ರ ಸುಮಾರಿಗೆ ವ್ಯಕ್ತಿಯೋರ್ವ ವಾಯುವಿಹಾರಕ್ಕೆಂದು ಸಮುದ್ರ ತೀರಕ್ಕೆ ಹೋಗಿದ್ದ. ಈ ವೇಳೆ, ಟ್ರಾವೆಲ್ ಬ್ಯಾಗ್ ನೋಡಿ ಅನುಮಾನಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು ಬ್ಯಾಗ್ ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಮಾತನಾಡಿದ ಪೊಲೀಸರು, ಮೃತ ಮಹಿಳೆ ಗುರುತು ಇನ್ನು ಪತ್ತೆಯಾಗಿಲ್ಲ. 25 ರಿಂದ 30 ವರ್ಷದ ಮಹಿಳೆ ಶವ ಇದಾಗಿದ್ದು, ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಲಾಗಿದೆ. ಆಕೆಯ ತೋಳುಗಳ ಮೇಲೆ ತ್ರಿಶೂಲ ಮತ್ತು ಹಿಂದಿಯಲ್ಲಿ ಓಂ ಎಂಬ ಹಚ್ಚೆಗಳಿವೆ ಎಂದಿದ್ದಾರೆ.
ಇನ್ನು, ಮೃತದೇಹವಿದ್ದ ಚೀಲವನ್ನು ಬೇರೆ ಕಡೆಯಿಂದ ತಂದು ಸಮುದ್ರ ತೀರಕ್ಕೆ ಎಸೆಯಲಾಗಿದೆಯೇ ಅಥವಾ ಸಮುದ್ರದಲ್ಲಿ ತೇಲಿ ಬಂದಿದೆಯಾ ಎಂಬುದನ್ನು ಪತ್ತೆ ಹಚ್ಚಲು ಪೊಲೀಸ್ರು ಪ್ರಯತ್ನಿಸುತ್ತಿದ್ದಾರೆ.(ಏಜೆನ್ಸೀಸ್)