ಬೆತ್ತಲೆ ಫೋಟೋ ಕಳುಹಿಸುವಂತೆ ಬ್ಲ್ಯಾಕ್​ಮೇಲ್ : ಇನ್​ಸ್ಟಾಗ್ರಾಂ ಖಾತೆ ತೆರೆದು ಗಾಬರಿಗೊಳಗಾದ 13ರ ಬಾಲಕಿ!

Instagram 4 May 20
Published on

ಬೆಂಗಳೂರು: ಪಾಲಕರೇ ಮಕ್ಕಳ ಕೈಗೆ ಮೊಬೈಲ್ ಕೊಡುವ ಮುನ್ನ ಒಮ್ಮೆ ಯೋಚಿಸುವುದು ಒಳ್ಳೆಯದು! ನಿಮ್ಮ ಮಕ್ಕಳು ಮೊಬೈಲ್ ಗೀಳು ಅಂಟಿಸಿಕೊಂಡು ದಿನವಿಡೀ ಮೊಬೈಲ್ ಬಳಕೆ ಮಾಡುತ್ತಿದ್ದರೆ ಅವರ ಚಟುವಟಿಕೆ ಮೇಲೆ ನಿಗಾವಹಿಸಿ. ಇಲ್ಲವಾದರೆ ಸಂಕಷ್ಟದಲ್ಲಿ ಸಿಲುಕುವ ಸಾಧ್ಯತೆ ಇದೆ.

ಬೆಂಗಳೂರಿನಲ್ಲಿ 13 ವರ್ಷದ ಬಾಲಕಿಗೆ ಇನ್‌ಸ್ಟಾಗ್ರಾಂ ಮೂಲಕ ಸ್ನೇಹ ಬೆಳೆಸಿದ್ದ ಅಪರಿಚಿತ ವ್ಯಕ್ತಿ, ತನ್ನ ಖಾಸಗಿ ವಿಡಿಯೋ ಮತ್ತು ಫೋಟೋಗಳನ್ನು ಕಳುಹಿಸಿದ್ದ. ಇದೀಗ ಅದೇರೀತಿಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ಕಳುಹಿಸುವಂತೆ ಬಾಲಕಿಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ.

ಏನಿದು ಪ್ರಕರಣ?: 13 ವರ್ಷದ ಸಂತ್ರಸ್ತ ಬಾಲಕಿ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿದ್ದು, ಬಳಕೆ ಮಾಡುತ್ತಿದ್ದಳು. ಕೆಲ ತಿಂಗಳ ಹಿಂದೆ ಅಪರಿಚಿತ ವ್ಯಕ್ತಿಯೊಬ್ಬ ಬಾಲಕಿಯ ಸ್ನೇಹ ಬೆಳೆಸಿದ್ದ. ಪ್ರತಿದಿನ ಚಾಟಿಂಗ್ ಮಾಡಿ ಸಂಪರ್ಕಿಸಿದ್ದ. ತನ್ನ ಅಶ್ಲೀಲ  ಫೋಟೋ ಹಾಗೂ ವಿಡಿಯೋಗಳನ್ನು ಆಕೆಗೆ ರವಾನಿಸಿದ್ದ. ಅದೇರೀತಿಯ ನಗ್ನ ಫೋಟೋ ಮತ್ತು ವಿಡಿಯೋಗಳನ್ನು ತನಗೆ ರವಾನಿಸುವಂತೆ ಬಾಲಕಿಗೆ ಸಂದೇಶ ಕಳುಹಿಸಿದ್ದ. ಇದರಿಂದ ಗಾಬರಿಗೊಂಡ ಬಾಲಕಿ, ಅಪರಿಚಿತ ಕಳುಹಿಸಿದ್ದ ನಗ್ನಫೋಟೋ ಮತ್ತು ವಿಡಿಯೋಗಳನ್ನು ಡಿಲೀಟ್ ಮಾಡಿದ್ದಳು. ಇದಾದ ಬಳಿಕವೂ ನಿರಂತರವಾಗಿ ಸಂದೇಶ ಕಳುಹಿಸಿ ನಗ್ನ ಫೋಟೋ ಕಳುಹಿಸುವಂತೆ ಒತ್ತಾಯಿಸಿದ್ದ.

ಈ ವಿಚಾರ ಪಾಲಕರಿಗೆ ಗೊತ್ತಾಗಿದ್ದು, ಅಪರಿಚಿತನ ಇನ್‌ಸ್ಟಾಗ್ರಾಂ ಖಾತೆಗೆ ರಿಪೋರ್ಟ್ ಮಾಡಿ ಸುಮ್ಮನಾಗಿದ್ದರು. ಮತ್ತೊಂದು ನಕಲಿ ಖಾತೆ ಸೃಷ್ಟಿಸಿಕೊಂಡಿರುವ ಆರೋಪಿ, ಲೈಂಗಿಕವಾಗಿ ಸಹಕರಿಸುವಂತೆ ಬಾಲಕಿಗೆ ಆಡಿಯೋ ಸಂದೇಶಗಳನ್ನು ಕಳುಹಿಸಿ ಪೀಡಿಸತೊಡಗಿದ್ದಾನೆ. ಈ ಕುರಿತು ಬಾಲಕಿಯ ಸಂಬಂಧಿ ಮಹಿಳೆಯೊಬ್ಬರು ಇಮೇಲ್ ಮೂಲಕ ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ಮುಟ್ಟಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯ ಪತ್ತೆಗಾಗಿ ತನಿಖೆ ಕೈಗೊಂಡಿದ್ದಾರೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net