ಮರಳುಗಾರಿಕೆ ವಿರುದ್ಧ ದೇವದುರ್ಗ ಚಲೋ ಹೋರಾಟ; ಶ್ರೀ ರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಮುತಾಲಿಕ್ ಹೇಳಿಕೆ

20122020 MUTALIK
Published on

ಪಿಎಸ್‌ಐ ಅಮಾನತಿಗೆ ಒತ್ತಾಯಿಸಿ ಕಾನೂನು ಹೋರಾಟ

ದೇವದುರ್ಗ: ತಾಲೂಕು ಕೃಷ್ಣಾ ಒಡಲಿನಲ್ಲಿ ನಡೆಯುತ್ತಿರುವ ಮರಳು ಅಕ್ರಮ ಗಣಿಗಾರಿಕೆ ವಿರುದ್ಧ ರಾಯಚೂರಿನಿಂದ ದೇವದುರ್ಗವರೆಗೆ ಶ್ರೀ ರಾಮಸೇನೆಯಿಂದ ದೇವದುರ್ಗ ಚಲೋ ಹೋರಾಟ ಶೀಘ್ರದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ತಾಲೂಕಿನಲ್ಲಿ ಪ್ರತಿನಿತ್ಯ 8-10 ಕೋಟಿ ರೂ. ಮರಳು ಮಾಫಿಯ ನಡೆಯುತ್ತಿದೆ. ನಿಯಮಮೀರಿ ಹಗಲುರಾತ್ರಿ ಎನ್ನದೆ 30-40 ಮೆಟ್ರಿಕ್ ಟನ್ ಮರಳು ಸಾಗಿಸಲಾಗುತ್ತಿದೆ. ಹಿಟಾಚಿ ಸೇರಿ ದೊಡ್ಡ ವಾಹನಗಳನ್ನು ನದಿಗೆ ಇಳಿಸಿ ಕೃಷ್ಣೆಯ ಒಡಲು ಬಗಿಯುತ್ತಿದ್ದಾರೆ. ಈ ಬಗ್ಗೆ ಪ್ರಶ್ನಿಸಿ, ನ್ಯಾಯಕ್ಕಾಗಿ ಹೋರಾಟ ಮಾಡುವ ಶ್ರೀರಾಮಸೇನೆ ಮುಖಂಡರ ವಿರುದ್ಧ ಸುಳ್ಳು ಜಾತಿನಿಂದನೆ ಕೇಸ್ ದಾಖಲಿಸಿ, ಥರ್ಡ್‌ಡಿಗ್ರಿ ಟಾರ್ಚ್‌ರ್ ನೀಡಲಾಗುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಶನಿವಾರ ಆರೋಪಿಸಿದರು.

ತಾಲೂಕಿನಲ್ಲಿ ಮರಳು ಮಾಫಿಯ ಮುಚ್ಚಿ ಹಾಕಲು ಖಾಕಿ ಕಾವಲು ಕಾಯುತ್ತಿದ್ದು, ಅಧಿಕಾರಿಗಳು ಭ್ರಷ್ಟರ ರಕ್ಷಣೆಗೆ ನಿಂತಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡುತ್ತಿರುವ ಶ್ರೀ ರಾಮ ಸೇನೆ ಮುಖಂಡರಿಗೆ ಬೆದಕರಿಗೆ ಕರೆಗಳು ಬರುತ್ತಿವೆ. ಈ ಬಗ್ಗೆ ದೂರು ನೀಡಿ 33 ದಿನ ಕಳೆದರೂ ಪ್ರಕರಣ ದಾಖಲಿಸಿಕೊಂಡಿಲ್ಲ. ಭ್ರಷ್ಟ ಅಧಿಕಾರಿಗಳ ಅಮಾನತು ಮಾಡುವಂತೆ ಒತ್ತಾಯಿಸಿ ಸಂಘಟನೆಯಿಂದ ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ಹಾಗೂ ಕಾನೂನಿನ ಒಳ ಹಾಗೂ ಹೊರಗೂ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಶ್ರೀ ರಾಮಸೇನೆ ರಾಜ್ಯ ಕಾರ್ಯದರ್ಶಿ ಹರೀಶ್, ಜಿಲ್ಲಾಧ್ಯಕ್ಷ ಮಂಜುನಾಥ ಬಾವಿ, ಶರಣಪ್ಪ ಲಕನಪುರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net