

ಕೊಪ್ಪಳ: ಇತ್ತೀಚಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೆಸರೇಳದೆ ಬಹಿರಂಗವಾಗಿ ವಾಗ್ದಾಳಿ ನಡೆಸಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ಗೆ ದೂರು ನೀಡುವುದಾಗಿ ಹೇಳಿಕೆ ನೀಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಬೇಕು ಎಂದು ಪರೋಕ್ಷವಾಗಿ ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ಕೊಪ್ಪಳ ಜಿಲ್ಲೆ ಕುಕನೂರು ತಾಲ್ಲೂಕಿನ ತಳಬಾಳ ಗ್ರಾಮದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಹರಿಪ್ರಸಾದ್ ನನ್ನ ವಿರುದ್ಧ ಹೈಕಮಾಂಡ್ಗೆ ದೂರು ನೀಡುವವರು ಮೊದಲು ತಮ್ಮ ಮೇಲಿರುವ ಹಗರಣಗಳಿಂದ ಪಾರಾಗಲಿ. ಹಗರಣಗಳಿಂದ ಪಾರಾಗುವ ಸಲುವಾಗಿಯೇ ನನ್ನ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ನನ್ನ ವಿರುದ್ಧ ದೂರು ನೀಡುವವರು ಮೊದಲು ತಾವು ಏನೆಂದು ತಿಳಿದುಕೊಳ್ಳಬೇಕು. ತಮ್ಮ ಮೇಲಿರುವ ಹಗರಣಗಳಿಂದ ಪಾರಾಗುವ ಸಲುವಾಗಿಯೇ ನನ್ನ ವಿರುದ್ಧ ಹೈಕಮಾಂಡ್ಗೆ ದೂರು ನೀಡುತ್ತಿದ್ದಾರೆ. ತಮ್ಮ ವಿರುದ್ಧದ ಹಗರಣಗಳಿಂದ ಪಾರಾಗುವ ಧೈರ್ಯವಿದ್ದರೆ ನಿರಂತರವಾಗಿ ದೂರು ನೀಡುವ ಹೇಳಿಕೆಗಳನ್ನು ನೀಡುತ್ತಿರಲಿಲ್ಲ.
ಪಕ್ಷದ ರಾಜ್ಯ ಉಸ್ತುವಾರಿಗೆ ದೂರು ನೀಡುವುದಾಗಿ ಕೆಲವರು ನಿರಂತರವಾಗಿ ಹೇಳುತ್ತಿದ್ದಾರೆ. ನನ್ನ ವಿರುದ್ಧ ದೂರು ಕೊಟ್ಟರೆ ಬಹಳ ಸಂತೋಷ ಉಸ್ತುವಾರಿ ಮಾತ್ರವಲ್ಲದೆ ಎಲ್ಲರಿಗೂ ದೂರು ನೀಡಲಿ ಎಂದು ಪರೋಕ್ಷವಾಗಿ ಮಾಲೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ನಂಜೇಗೌಡ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಸರ್ಕಾರ ಮೂರು ತಿಂಗಳಲ್ಲಿ ಪತನವಾಗಲಿದೆ ಎಂಬ ಶಾಸಕ ಬಸನ್ಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿ ಬಿಜೆಪಿಗರು ಹಗಲು ಕನಸು ಕಾಣುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವುದೇ ತರಹದ ಕಿತ್ತಾಟವಿಲ್ಲ. ನಮ್ಮಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದೆ. ಅದರಂತೆ ನಾವು ಮುಕ್ತವಾಗಿ ಮಾತನಾಡುತ್ತೇವೆ. ಅವರಂತೆ ನಾಗ್ಪುರದಿಂದ ನಿರ್ದೇಶನ ತೆಗೆದುಕೊಂಡು ಮಾತನಾಡುವುದಿಲ್ಲ ಎಂದು ಶಾಸಕ ಯತ್ನಾಳ್ ಹೇಳಿಕೆಗೆ ವಿಧಾನಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್ ತಿರುಗೇಟು ನೀಡಿದ್ದಾರೆ.