

ಬಳ್ಳಾರಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಇನ್ನೂ ಸುದೀರ್ಘ ಚರ್ಚೆಯಾಗಿಲ್ಲ. ಮುಂಬರುವ ದಿನಗಳಲ್ಲಿ ಅದು ಆಗಬಹುದು ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಬಳ್ಳಾರಿಯಲ್ಲಿ ಈ ಕುರಿತು ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳ ಆಡಳಿತ ನೋಡಿದ ಮೇಲೆ ಎಲ್ಲರೂ ವಿರೋಧಿಸುವ ಅವಶ್ಯಕತೆಯಿದೆ. ಸಿದ್ದರಾಮಯ್ಯನವರ ಹಿಂದಿನ ಹಾಗೂ ಈಗಿನ ಆಡಳಿತಕ್ಕೆ ಸಾಕಷ್ಟು ವ್ಯತ್ಯಾಸವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ಅವರ ಹೇಳಿಕೆ ಪ್ರಕಾರ ಮಾತುಕತೆ ಇನ್ನೂ ಪ್ರಾಥಮಿಕ ಹಂತದಲ್ಲಿದೆ ಎಂಬುದು ಅರ್ಥವಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ವಿಚಾರವಾಗಿ ಎಲ್ಲಾ ಹಂತಗಳಲ್ಲಿಯೂ ಸುದೀರ್ಘವಾಗಿ ಚರ್ಚೆ ಮಾಡಬೇಕಿದೆ. ಮುಂಬರುವ ದಿನಗಳಲ್ಲಿ ಇದು ಆಗಬಹುದು ಎಂದು ತಿಳಿಸಿದ್ದಾರೆ.
ಸಿದ್ದರಾಮಯ್ಯನವರು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆಸಿದಂತಹ ಆಡಳಿತಕ್ಕೂ ಈಗಿನದ್ದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಆಂತರಿಕವಾಗಿ ಕಾಂಗ್ರೆಸ್ನಲ್ಲಿ ಬಹಳಷ್ಟು ನಾಯಕರಿಗೆ ಬೇಗುದಿ ಇದ್ದು, ಅದರಲ್ಲಿ ಮೊದಲನೆಯವರಾಗಿ ಹರಿಪ್ರಸಾದ್ ಎಂದು ಹೇಳಬಹುದು. ಅವರ ಹೇಳಿಕೆಗೆ ಮುಖ್ಯಮಂತ್ರಿಗಳು ಪ್ರತಿಕ್ರಿಯಿಸಲು ನಿರಾಕರಿಸುತ್ತಿರುವುದನ್ನು ಗಮನಿಸಿದರೆ ಹರಿಪ್ರಸಾದ್ ಕಾಂಗ್ರೆಸ್ನಲ್ಲಿ ಪ್ರಬಲ ನಾಯಕರಾಗಿರುವುದು ಕಂಡು ಬರುತ್ತದೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.