

ಕೋಲ್ಕತ: ಕೇಂದ್ರದ ಆಡಳಿತದೊಂದಿಗೆ ಬಹುತೇಕ ರಾಜ್ಯಗಳಲ್ಲಿ ಆಡಳಿತ ಸಾಧಿಸಿರುವ ಬಿಜೆಪಿ ಪಕ್ಷ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಗೆದ್ದು, ರಾಜ್ಯವನ್ನು ತನ್ನ ಅಧಿಕಾರಕ್ಕೆ ತೆಗೆದುಕೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಹೇಳಿದ್ದಾರೆ. ಎರಡು ದಿನಗಳ ಕಾಲ ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಅವರು ಇಂದು ಕೋಲ್ಕತದಲ್ಲಿ ಈ ಮಾತನ್ನು ಹೇಳಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ ಮಮತಾ ಅವರಿಗೆ 2010ರಲ್ಲಿ ಅಧಿಕಾರವನ್ನು ಕೊಡಲಾಯಿತು. ಆದರೆ ಈ 10 ವರ್ಷಗಳಲ್ಲಿ ಅವರ ಸರ್ಕಾರ ಟೊಳ್ಳು ಸರ್ಕಾರ ಎನ್ನುವುದು ಸಾಬೀತಾಗಿದೆ. ಇಲ್ಲಿನ ಜನರಿಗೆ ಅವರ ಬಗ್ಗೆ ಆಕ್ರೋಶ ಹುಟ್ಟಿದೆ. ಮುಂದಿನ ವರ್ಷದ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಟಿಎಂಸಿ ವಿರುದ್ಧ 200 ಸೀಟುಗಳ ಜಯ ಸಾಧಿಸಲಿದೆ ಎಂದು ಅವರು ಹೇಳಿದ್ದಾರೆ.
2021ರಲ್ಲಿ ನಡೆಯಲಿರುವ ಚುನಾವಣೆಗೆ ಈಗಾಗಲೇ ಪ್ರಚಾರ ಆರಂಭಿಸಿರುವ ಅವರು, ಜನರಲ್ಲಿ ಈ ಬಾರಿ ಬಿಜೆಪಿಗೇ ಮತ ನೀಡುವಂತೆ ಕೇಳಿಕೊಂಡಿದ್ದಾರೆ. ನೀವು ಕಾಂಗ್ರೆಸ್ಗೆ ಮತ ನೀಡಿದಿರಿ, ಕಮ್ಯುನಿಸ್ಟರಿಗೆ ಮತ ನೀಡಿದಿರಿ, ಟಿಎಂಸಿಗೂ ಮತ ನೀಡಿದಿರಿ. ಈಗ ಬಿಜೆಪಿಗೆ ಮತ ನೀಡಿ. ಕೇಂದ್ರ ಸರ್ಕಾರದಿಂದ ಬರುವ ಯಾವ ಹಣವನ್ನು ಟಿಎಂಸಿ ಸರ್ಕಾರ ಜನರಿಗೆ ಬಳಸುತ್ತಿಲ್ಲ. ಕರೊನಾದಂತಹ ಸಂಕಷ್ಟದ ಸಮಯದಲ್ಲೂ ಪಕ್ಷ ಭ್ರಷ್ಟಾಚಾರವನ್ನು ಮುಂದುವರಿಸಿದೆ. ಈ ದುಸ್ಥಿತಿಯನ್ನು ನಮ್ಮ ಪಕ್ಷ ಆಡಳಿತಕ್ಕೆ ಬಂದ ಮೇಲೆ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್)