

ಬೆಂಗಳೂರು: ಪುರುಷರ ಐಪಿಎಲ್ ಟೂರ್ನಿಯ ಪ್ಲೇಆಫ್ ಹಂತದ ಜತೆಜತೆಯಲ್ಲೇ ‘ಮಹಿಳೆಯರ ಮಿನಿ ಐಪಿಎಲ್’ ಖ್ಯಾತಿಯ ಮಹಿಳಾ ಟಿ20 ಚಾಲೆಂಜ್ ಟೂರ್ನಿ ಶುರುವಾಗಿದೆ. ಇದೇ ವೇಳೆ ಸಣ್ಣ ವಿವಾದವೊಂದು ಕೂಡ ಸೃಷ್ಟಿಯಾಗಿದೆ. ಮಹಿಳಾ ಟಿ20 ಚಾಲೆಂಜ್‌ನಲ್ಲಿ ವೆಲಾಸಿಟಿ ತಂಡವನ್ನು ಮುನ್ನಡೆಸುತ್ತಿರುವ ಭಾರತದ ಹಿರಿಯ ಬ್ಯಾಟುಗಾರ್ತಿ ಮಿಥಾಲಿ ರಾಜ್ ಅವರನ್ನು ‘ಮೈ ಡಿಯರ್’ ಎಂದು ಸಂದರ್ಶನದ ವೇಳೆ ಕರೆದ ವೀಕ್ಷಕವಿವರಣೆಕಾರ ಹಾಗೂ ನಿರೂಪಕ ಡ್ಯಾನಿ ಮಾರಿಸನ್ ವಿವಾದಕ್ಕೆ ಸಿಲುಕಿದ್ದಾರೆ. ಸ್ತ್ರಿಸಮಾನತಾವಾದಿಗಳಿಂದ ಅವರು ತೀವ್ರ ಟೀಕೆಗಳಿಗೂ ಒಳಗಾಗಿದ್ದಾರೆ.
ಮಿಥಾಲಿ ರಾಜ್ ಸಾರಥ್ಯದ ವೆಲಾಸಿಟಿ ತಂಡ ಗುರುವಾರದ ಪಂದ್ಯದಲ್ಲಿ ಕೇವಲ 47 ರನ್‌ಗೆ ಆಲೌಟ್ ಆಗಿ 9 ವಿಕೆಟ್‌ಗಳಿಂದ ಟ್ರೈಲ್‌ಬ್ಲೇಜರ್ಸ್ ತಂಡಕ್ಕೆ ಶರಣಾಯಿತು. ಈ ಪಂದ್ಯದ ಬಳಿಕ ಮಿಥಾಲಿ ರಾಜ್ ಅವರೊಂದಿಗೆ ಮಾತನಾಡುತ್ತ ನ್ಯೂಜಿಲೆಂಡ್‌ನ ಮಾಜಿ ವೇಗಿ ಡ್ಯಾನಿ ಮಾರಿಸನ್, ‘ನಾಳೆ ವಿರಾಮದ ದಿನ. ಮೈ ಡಿಯರ್ ಮಿಥಾಲಿ ರಾಜ್... ನೀವೇನು ಮಾಡುತ್ತೀರಿ, ನಿಮ್ಮ ವೆಲಾಸಿಟಿ ತಂಡ ನಾಳೆ ಏನು ಮಾಡಲಿದೆ?’ ಎಂದು ಪ್ರಶ್ನಿಸಿದ್ದರು.
ಇದಕ್ಕೆ ಪ್ರತಿಯಾಗಿ 37 ವರ್ಷದ ಮಿಥಾಲಿ ರಾಜ್, ‘ನಾವು ಖಂಡಿತವಾಗಿಯೂ ಈ ಹೀನಾಯ ಸೋಲಿನಿಂದ ಚೇತರಿಸಿಕೊಳ್ಳುವೆವು. ಸತತ 2 ಪಂದ್ಯಗಳನ್ನು ಆಡಬೇಕಾಗಿ ಬಂದಿತು. ಹೀಗಾಗಿ ನಮಗೆ ಈ ಪಂದ್ಯಕ್ಕೆ ಹೆಚ್ಚಿನ ಸಿದ್ಧತೆ ನಡೆಸಲು ಸಾಧ್ಯವಾಗಲಿಲ್ಲ. ಯಾವುದೇ ತಂಡ ರಾತ್ರಿ ಬೆಳಗಾಗುವುದರೊಳಗೆ ಕೆಟ್ಟ ತಂಡ ಆಗುವುದಿಲ್ಲ. ಇಂದು ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡ ತಂಡದ ಆಟಗಾರ್ತಿಯರಿಗೆ ಸ್ಫೂರ್ತಿ ತುಂಬಬೇಕಾಗಿದೆ’ ಎಂದು ಹೇಳಿದ್ದರು. ಆಗ ಮಾರಿಸನ್, ‘ಹೀಗೆ ನಗುತ್ತಿರಿ. ಶೀಘ್ರವೇ ನಿಮ್ಮನ್ನು ಮತ್ತೊಮ್ಮೆ ನೋಡುವೆ’ ಎಂದಿದ್ದರು.
ಮಾರಿಸನ್ ಅವರ ಈ ಮಾತಿಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಖ್ಯಾತ ಕ್ರೀಡಾ ಪತ್ರಕರ್ತೆ ರಾಫ್ ನಿಕೋಲ್‌ಸನ್, ‘2020ರಲ್ಲಿ ಈ ರೀತಿ ಹೇಳಲಾಗುತ್ತಿದೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ, ದಯವಿಟ್ಟು, ಪಂದ್ಯದ ಮೊದಲು ಮತ್ತು ನಂತರ ಮಹಿಳಾ ಕ್ರೀಡಾಪಟುಗಳನ್ನು ‘ಮೈ ಡಿಯರ್’ ಎಂದು ಕರೆಯಬೇಡಿ ಅಥವಾ ‘ಹೀಗೆ ನಗುತ್ತಿರಿ’ ಎಂದು ಹೇಳಬೇಡಿ’ ಎಂದು ಟ್ವೀಟಿಸಿದ್ದಾರೆ.
‘ಅಂತಾರಾಷ್ಟ್ರೀಯ ಮಹಿಳಾ ಕ್ರೀಡಾಪಟುಗಳನ್ನು ‘ಮೈ ಡಿಯರ್’ ಎಂದು ಸಂದರ್ಶನದ ವೇಳೆ ಕರೆಯಬೇಡಿ. ನೀವು ಪುರುಷರಿಗೆ ಅದೇ ರೀತಿ ಹೇಳುವುದಿಲ್ಲವಾದರೆ, ಮಹಿಳೆಯರಿಗೂ ಅದನ್ನು ಹೇಳುವ ಅಗತ್ಯವಿಲ್ಲ ಎಂದು ಡಬ್ಲ್ಯುಸಿಎಂ ಅಂಕಣಕಾರ್ತಿ ಇಸಾಬೆಲ್ ವೆಸ್ಟ್‌ಬರಿ ಕೂಡ ಹೇಳಿದ್ದಾರೆ. ನೀವು ಎಂಎಸ್ ಧೋನಿಗೆ ‘ಮೈ ಡಿಯರ್’ ಎಂದು ಕರೆಯುವುದಿಲ್ಲ ಎಂದಾದರೆ, ಮಿಥಾಲಿ ರಾಜ್‌ರನ್ನೂ ಆ ರೀತಿ ಕರೆಯುವ ಆಲೋಚನೆ ನಿಮ್ಮ ತಲೆಯಲ್ಲಿ ಬರಬಾರದು ಎಂದು ಹೇಳಿದ್ದಾರೆ.