

ಗಾಜಿಯಾಬಾದ್: ಲಾಕ್ಡೌನ್ ಸಮಯದಲ್ಲಿ ಯಾರ್ಯಾರು ಏನೇನು ಮಾಡಿದ್ದೀರಿ ಎಂದು ಕೇಳಿದರೆ, ಕೆಲವೊಂದಿಷ್ಟು ಜನರ ತಮ್ಮ ಹೊಸ ರುಚಿಯ ಅಡುಗೆಗಳ ಬಗ್ಗೆ ಹೇಳಬಹುದು. ಇನ್ನೊಂದಿಷ್ಟು ಜನ ತಾವು ಓದಿದ ಪುಸ್ತಕಗಳ ಬಗ್ಗೆ ಹೇಳಿಕೊಳ್ಳಬಹುದು. ಇನ್ನು ಅನೇಕರು ನಿದ್ರೆ, ಫೇಸ್ಬುಕ್, ಇನ್ಸ್ಟಾದಲ್ಲೇ ಕಾಲ ಕಳೆದಿದ್ದಾಗಿ ಹೇಳಿಕೊಳ್ಳಬಹುದು. ಆದರೆ ಏಳು ವರ್ಷದ ಪೋರಿಯೊಬ್ಬಳು ತನ್ನ ಬರೆಯುವ ಆಸಕ್ತಿಗೆ ಇನ್ನಷ್ಟು ಉತ್ತೇಜನ ನೀಡಿ, ಮಕ್ಕಳ ಪುಸ್ತಕವೊಂದನ್ನು ಬಿಡುಗಡೆ ಮಾಡಿ, ಜನರ ಹುಬ್ಬೇರುವಂತೆ ಮಾಡಿದ್ದಾಳೆ. ಈ ಬಾಲಕಿ ಇದೀಗ ವಿಶ್ವದ ಅತ್ಯಂತ ಕಿರಿಯ ಲೇಖಕಿ ಎನ್ನುವ ಹೆಗ್ಗಳಿಕೆಗೂ ಪಾತ್ರಳಾಗಿದ್ದಾಳೆ.
ರಾಷ್ಟ್ರಕವಿ ಮೈಥಿಲಿ ಶರಣ್ ಗುಪ್ತಾ ಮತ್ತು ಸಂತಕವಿ ಸಿಯಾರಾಮ್ಶರಣ್ ಗುಪ್ತಾ ದಂಪತಿ ನಿಮಗೆ ಗೊತ್ತಿರಬಹುದು. ಈಗ ಈ ನೂತನ ದಾಖಲೆ ಬರೆದಿರುವುದು ಇವರ ಮೊಮ್ಮಗಳೇ. ಈ ದಂಪತಿಯ ಮೊಮ್ಮಗಳು ಅಭಿಜಿತಾ ಗುಪ್ತಾ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ತನ್ನ ತಂದೆ ತಾಯಿಯೊಂದಿಗೆ ನೆಲೆಸಿದ್ದಾಳೆ. ಈಕೆಗೆ ಮೊದಲಿನಿಂದಲೂ ಪುಸ್ತಕ, ಬರವಣಿಗೆ ಬಗ್ಗೆ ಸಾಕಷ್ಟು ಆಸಕ್ತಿ ಇತ್ತು. ಆದರೆ ವಿದ್ಯಾಭ್ಯಾಸದ ಕಾರಣದಿಂದಾಗಿ ಅದರತ್ತ ಹೆಚ್ಚಿನ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ಲಾಕ್ಡೌನ್ ಸಮಯದಲ್ಲಿ ಸಾಕಷ್ಟು ಸಮಯ ಸಿಕ್ಕ ಹಿನ್ನೆಲೆಯಲ್ಲಿ, ತನ್ನದೇ ಆದ ಒಂದು ಪುಸ್ತಕವನ್ನು ಬರೆದಿದ್ದಾಳೆ. ಒಂದು ಪುಟ್ಟ ಮಗುವಿನಿಂದ ಮಕ್ಕಳಿಗಾಗಿ ಬರೆಯಲಾದ ಹ್ಯಾಪಿನೆಸ್ ಆಲ್ ಅರೌಂಡ್ ಪುಸ್ತಕವನ್ನು ಪ್ರಕಟಿಸಲಾಗಿದೆ.
ಬಾಲಕಿಯ ಈ ಸಾಧನೆ ಇಂಟರ್ನ್ಯಾಷನಲ್ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲಾಗಿದೆ. ವಿಶ್ವದ ಅತ್ಯಂತ ಕಿರಿಯ ಲೇಖಕಿ ಎಂದು ನಮೂದಿಸಲಾಗಿದೆ. ಏಷ್ಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಗ್ರ್ಯಾಂಡ್ ಮಾಸ್ಟರ್ ಇನ್ ರೈಟಿಂಗ್ ಎನ್ನುವ ಶೀರ್ಷಿಕೆಯನ್ನು ಕೊಡಲಾಗಿದೆ.
ಅಭಿಜಿತಾ ತನ್ನ ನಾಲ್ಕನೇ ವಯಸ್ಸಿನಿಂದಲೂ ಬರೆಯುವ ಹವ್ಯಾಸ ಇಟ್ಟುಕೊಂಡಿದ್ದಳಂತೆ. ಆ ವಯಸ್ಸಿಗೆ ತನಗೆ ಬರುತ್ತಿದ್ದ ನಾಲ್ಕೈದು ಪದಗಳನ್ನೇ ಬಳಸಿಕೊಂಡು ಕಥೆಯೊಂದನ್ನು ಬರೆದಿದ್ದಳು. ಮನುಷ್ಯನಿಗೆ ಊಟ ಏಕೆ ಮುಖ್ಯ ಎಂದು ಬರೆದಿದ್ದ ಆ ಕಥೆಯನ್ನು ಪೂರ್ತಿ ಕುಟುಂಬ ಮೆಚ್ಚಿಕೊಂಡಿತ್ತು ಎನ್ನುತ್ತಾರೆ ಅಭಿಜಿತಾ ತಾಯಿ ಅನುಪ್ರಿಯಾ.