ಲೋಕಸಭೆ ಚುನಾವಣಾ ಪ್ರಚಾರದಲ್ಲಿ ಅರವಿಂದ್ ಕೇಜ್ರಿವಾಲ್ ತಡೆಯಲು ಬಿಜೆಪಿ ಯತ್ನಿಸುತ್ತಿದೆ: ಗೋಪಾಲ್ ರೈ

ವಿಜಯವಾಣಿ - 2024-01-13T153746.083
Published on

ಹೊಸದಿಲ್ಲಿ: ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಲೋಕಸಭೆ ಚುನಾವಣೆ ಪ್ರಚಾರದಿಂದ ತಡೆಯಲು ಬಿಜೆಪಿ ಜಾರಿ ನಿರ್ದೇಶನಾಲಯವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಗೋಪಾಲ್ ರೈ ಆರೋಪಿಸಿದ್ದು, ಈ ಹೇಳಿಕೆ ಶನಿವಾರ ಸಿಎಂಗೆ ಇಡಿ ನಾಲ್ಕನೇ ಸಮನ್ಸ್ ಕಳುಹಿಸಿದ ಬೆನ್ನಲ್ಲೇ ಮುನ್ನೆಲೆಗೆ ಬಂದಿದೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಗೋಪಾಲ್ ರೈ, ಕೇಜ್ರಿವಾಲ್‌ಗೆ ಜಾರಿ ನಿರ್ದೇಶನಾಲಯವು ನೀಡಿದ ಸಮನ್ಸ್‌ನ ಸಮಯವನ್ನು ಪ್ರಶ್ನಿಸಿ, ಇದು ಜನವರಿ 18ರಿಂದ ಅವರ ಗೋವಾ ಪ್ರವಾಸಕ್ಕೆ ಮುಂಚಿತವಾಗಿ ಬಂದಿದೆ ಎಂದು ಹೇಳಿದರು. ಇಡಿ ಬಿಜೆಪಿಯ ರಾಜಕೀಯ ಅಸ್ತ್ರವಾಗುವುದನ್ನು ತಡೆಯಬೇಕು ಎಂದು ಕಿಡಿಕಾರಿದರು.

ಸಮನ್ಸ್‌ನ ಸುದ್ದಿ ದೆಹಲಿ ಮುಖ್ಯಮಂತ್ರಿಗೆ ತಲುಪುವ ಮೊದಲೇ ಮಾಧ್ಯಮಗಳಿಗೆ ಸೋರಿಕೆಯಾಗಿದೆ ಎಂದು ಆರೋಪಿಸಿದ ರೈ, ಈ ಬಾರಿ ಇಡಿ ಮುಂದೆ ಕೇಜ್ರಿವಾಲ್ ಹಾಜರಾಗುತ್ತಾರೆಯೇ ಎಂಬ ಪ್ರಶ್ನೆಗೆ, ಸಿಎಂ ಕಾನೂನು ಸಲಹೆಗಾರರನ್ನು ಸಂಪರ್ಕಿಸುತ್ತಿದ್ದಾರೆ ಹಾಗೂ ಅದರಂತೆ ಕಾರ್ಯನಿರ್ವಹಿಸಲಿದ್ದಾರೆ ಎಂದು ಉತ್ತರಿಸಿದರು.

ದೆಹಲಿ ಅಬಕಾರಿ ನೀತಿ ಸಂಬಂಧಿತ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗಾಗಿ ಜಾರಿ ನಿರ್ದೇಶನಾಲಯವು ನಾಲ್ಕನೇ ಬಾರಿಗೆ ಕೇಜ್ರಿವಾಲ್‌ಗೆ ಸಮನ್ಸ್ ಜಾರಿಗೊಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net