ಪ್ರಧಾನಿ ಮೋದಿ 2.0 ಸರ್ಕಾರದ ಮೊದಲ ವಾರ್ಷಿಕೋತ್ಸವಕ್ಕೆ ಬಿಜೆಪಿ ಮೆಗಾ ಪ್ಲ್ಯಾನ್​!

Modi 14 May 20
Published on

ನವದೆಹಲಿ: ಎರಡನೇ ಬಾರಿಗೆ ಕೇಂದ್ರದ ಗದ್ದುಗೆ ಹಿಡಿದಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮೇ 30ಕ್ಕೆ ಒಂದು ವರ್ಷ ಪೂರೈಸಲಿದ್ದು, ಮೊದಲ ವಾರ್ಷಿಕೋತ್ಸವವನ್ನು ಸ್ಮರಣೀಯವಾಗಿಸಲು ಜೂನ್​ ಆರಂಭದಿಂದ ಒಂದು ತಿಂಗಳು ಬಿಜೆಪಿ ಮೆಗಾ ಅಭಿಯಾನ ಹಮ್ಮಿಕೊಳ್ಳಲಿದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಭೂಪೇಂದ್ರ ಯಾದವ್​, ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್​ ರ‍್ಯಾಲಿಗಳನ್ನು ನಡೆಸುತ್ತೇವೆ ಎಂದರು. ಕರೊನಾ ವೈರಸ್​ ಸಂಕಷ್ಟದ ಸಮಯದಲ್ಲಿ ಪಕ್ಷವೂ ಸಾರ್ವಜನಿಕರ ಜತೆ ನಿಂತಿದೆ. ನಮ್ಮ ಕಾರ್ಯಕರ್ತರು 19 ಕೋಟಿ ಆಹಾರ ಪೊಟ್ಟಣಗಳನ್ನು ವಿತರಿಸಿದ್ದಾರೆ. 4 ಕೋಟಿಗೂ ಅಧಿಕ ರೇಷನ್​ ಕಿಟ್​ಗಳನ್ನು ದೇಶಾದ್ಯಂತ ನೀಡಿದೆ ಎಂದು ತಿಳಿಸಿದರು.

ಆರೋಗ್ಯ ಬಿಕ್ಕಟ್ಟಿನ ನಡುವೆ ಬಿಜೆಪಿ ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದಾರೆ. ದೇಶದ ಎಲ್ಲಾ ಜಿಲ್ಲೆಗಳಲ್ಲಿ 909 ಸಂಘಟನೆಗಳ ಮೂಲಕ ಜನರಿಗೆ ಸೇವೆ ನೀಡುತ್ತಿದ್ದು, ಎಲ್ಲರಿಗೂ ಅಗತ್ಯವಾದ ನೆರವನ್ನು ನೀಡುತ್ತಿದ್ದಾರೆ. ಆಹಾರವನ್ನು ಹೊರತುಪಡಿಸಿ 5 ಕೋಟಿ ಮಾಸ್ಕ್​ ಕೂಡ ವಿತರಿಸಿದ್ದಾರೆ. ಆರೋಗ್ಯ ಸೇತು ಆ್ಯಪ್​ ಮೂಲಕ ಜನರಿಗೆ ಅರಿವು ಮೂಡಿಸಿದ್ದಾರೆ. ಅಲ್ಲದೆ, ಪ್ರಧಾನಿ ನಿಧಿಗೆ ದೇಣಿಗೆ ನೀಡಲು ಉತ್ತೇಜಿಸಿದ್ದಾರೆ ಎಂದರು.

ಮೋದಿ ಸರ್ಕಾರದ ಮೊದಲ ವಾರ್ಷಿಕೋತ್ಸವದ ಬಗ್ಗೆ ಮಾತನಾಡಿ, ಪಕ್ಷವೂ ದೇಶಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಡಿಜಿಟಲ್​ ರ‍್ಯಾಲಿಗಳನ್ನು ನಡೆಸಲಿದೆ. ನಮ್ಮ ಏಳು ವಿಭಾಗಗಳು ಸುಮಾರು 500 ಡಿಜಿಟಲ್​ ರ‍್ಯಾಲಿಗಳನ್ನು ಆಯಾ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳಲಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಫೇಸ್​ಬುಕ್​ ಲೈವ್​ ಮೂಲಕ ಮಾತನಾಡಿದ ಪಕ್ಷದ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ, ಪ್ರಧಾನಿ ಮೋದಿ ಹಸ್ತಾಕ್ಷರವುಳ್ಳ ಸ್ವಾವಲಂಬಿ ಭಾರತ ಹಾಗೂ ಸರ್ಕಾರದ ಸಾಧನೆಗಳನ್ನು ಸಾರುವ ಪತ್ರವನ್ನು ಪ್ರತಿ ಮನೆಗೂ ತಲುಪಿಸಬೇಕು. ಸುಮಾರು 10 ಕೋಟಿ ಕುಟುಂಬಗಳಿಗೆ ವಿತರಿಸಲಿದ್ದೇವೆ. ಹೀಗಾಗಿ ಒಂದು ತಿಂಗಳ ದೀರ್ಘಾವಧಿ ಅಭಿಯಾನ ನಡೆಸಲಾಗುವುದು ಎಂದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net