

ರಿಯಾಲಿಟಿ ಶೋನ ಗಟ್ಟಿಗಿತ್ತಿ ಹಾಗೂ ಗ್ಲಾಮರ್ ಗೊಂಬೆ ಮೆಬಿನಾ ಮೈಕೆಲ್ ಇನ್ನಿಲ್ಲ ಎಂಬುದನ್ನು ಅನೇಕರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕೇವಲ 22ನೇ ವಯಸ್ಸಿನಲ್ಲಿಯೇ ಮೆಬಿನಾ ಬಾರದ ಲೋಕಕ್ಕೆ ಪಯಣಿಸಿರುವುದು ದುರ್ದೈವದ ಸಂಗತಿ. ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಮೆಬಿನಾ ತಾಯಿಯ ಒಬ್ಬಳ್ಳೆ ಮುದ್ದಿನ ಮಗಳಾಗಿದ್ದಳು. ಸದಾ ಲವಲವಿಕೆಯಿಂದಿದ್ದ ಮೆಬಿನಾಗೆ ಡ್ಯಾನ್ಸ್ ಎಂದರೆ ಅಚ್ಚುಮೆಚ್ಚಾಗಿತ್ತು. ಹೀಗಾಗಿಯೇ ಜಾಲತಾಣದಲ್ಲಿ ಅಭಿಮಾನಿಗಳನ್ನು ಸದಾ ರಂಜಿಸುತ್ತಿದ್ದರು.
ಇದರ ಮಧ್ಯೆ ನಾಲ್ಕು ದಿನದ ಹಿಂದೆ ಟಿಕ್ಟಾಕ್ನಲ್ಲಿ ಮೆಬಿನಾ ಆಡಿದ್ದ ಮಾತು ಇದೀಗ ಮತ್ತೆ ವೈರಲ್ ಆಗಿದೆ. ಟಿಕ್ಟಾಕ್ನಲ್ಲಿ ಕನ್ನಡ ಚಿತ್ರಗಳ ಡೈಲಾಗ್ ಹಾಗೂ ಹೆಸರುಗಳನ್ನು ಗುರುತಿಸುವ ಒಂದು ಸವಾಲಿದೆ. ಅದನ್ನು ಸ್ವೀಕರಿಸಿದ್ದ ಮೆಬಿನಾ "ಎಂಥ ಸಾವು ಮಾರ್ರೇ" ಎಂಬ ಡೈಲಾಗ್ ಅನ್ನು ಪತ್ತೆ ಹಚ್ಚಿದ್ದರು. ಇದೀಗ ಆ ವಿಡಿಯೋ ವೈರಲ್ ಆಗಿದ್ದು, ಫಾಲೋವರ್ಸ್ಗಳು ಕಂಬನಿ ಮಿಡಿದಿದ್ದಾರೆ.
ಫ್ಯಾನ್ಸ್ ಒಬ್ಬರು ಕಮೆಂಟ್ ಮಾಡಿ ಯಾವ ಗಳಿಗೆಯಲ್ಲಿ ಈ ವಿಡಿಯೋ ಮಾಡಿದ್ರು ಹಾಗೇ ಆಗೋಯ್ತು. ತುಂಬಾ ತುಂಬಾ ಮಿಸ್ ಮಾಡ್ಕೊತಾ ಇದೀನಿ ಮತ್ತೆ ಹುಟ್ಟಿ ಬನ್ನಿ ಅಕ್ಕ. ನಿಜಕ್ಕೂ ನಮಗೆ ನಂಬೋಕೆ ಆಗ್ತಿಲ್ಲ. ನನಗೆ ತುಂಬಾ ಅಳು ಬರುತ್ತಿದೆ ಎಂದು ಭಾವುಕರಾಗಿದ್ದಾರೆ. ಮತ್ತೋರ್ವ ಫಾಲೋವರ್ಸ್ ನಿನ್ನ ಜೀವನದಲ್ಲಿ ಈ ಮಾತು ನಿಜ ಆಯ್ತಲ್ಲಾ ಅಕ್ಕ. ಮತ್ತೊಮ್ಮೆ ಹುಟ್ಟಿ ಬಾ ಅಕ್ಕಾ ಎಂದಿದ್ದಾರೆ. ಹೀಗೆ ಅನೇಕರು ವಿಡಿಯೋ ಕೆಳಗೆ ಕಮೆಂಟ್ ಮಾಡಿ ಸಂತಾಪ ವ್ಯಕ್ತಪಡಿಸಿದ್ದಾರೆ.