ಗರ್ಭಿಣಿ ಮೇಲೆ ಹಲ್ಲೆ ಪ್ರಕರಣ; ಕಾಂಗ್ರೆಸ್​ ಸರ್ಕಾರದ ವೈಫಲ್ಯದಿಂದಲೇ ಈ ರೀತಿ ಘಟನೆಗಳು ನಡೆಯುತ್ತಿವೆ: ಜೆ.ಪಿ. ನಡ್ಡಾ

JP Nadda
Published on

ಜೈಪುರ: ನಾಲ್ಕು ತಿಂಗಳ ಗರ್ಭಿಣಿಯನ್ನು ಅಮಾನುಷವಾಗಿ ಥಳಿಸಿ, ವಿವಸ್ತ್ರಗೊಳಿಸಿ ಮೆರವಣಿಗೆ ಮಾಡಿರುವ ಘಟನೆ ರಾಜಸ್ಥಾನದ ಪ್ರತಾಪ್​​ಗಢ ಜಿಲ್ಲೆಯಲ್ಲಿ ನಡೆದಿದೆ. ಪ್ರಕರಣ ಸಂಬಂಧ ಪೊಲೀಸರು ಮಹಿಳೆಯ ಪತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿದ್ಧಾರೆ.

ವರ್ಷಾಂತ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ರಾಜಸ್ಥಾನದಲ್ಲಿ ಈ ಪ್ರಕರಣವು ಹೆಚ್ಚು ಕಾವು ಪಡೆದಿದ್ದು, ಆಡಳಿತರೂಢ ಕಾಂಗ್ರೆಸ್​ ಹಾಗೂ ಬಿಜೆಪಿ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪಗಳಲ್ಲಿ ತೊಡಗಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಇದು ಆಘಾತಕಾರಿ ವಿಷಯವಾಗಿದ್ದು, ರಾಜಸ್ಥಾನದಲ್ಲಿ ಪ್ರತಿನಿತ್ಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚತ್ತಲೇ ಇದೆ. ಇತ್ತ ಸಿಎಂ ಅಶೋಕ್​ ಗೆಹ್ಲೋಟ್​ ಹಾಗೂ ಅವರ ಸಂಪುಟದ ಸಚಿವರು ಬಣ ರಾಜಕೀಯದ ಗಲಾಟೆ ಬಿಡಿಸುವಲ್ಲಿ ನಿರತರಾಗಿದ್ದಾರೆ. ಇನ್ನುಳಿದ ಸಮಯವನ್ನು ದೆಹಲಿಯಲ್ಲಿರುವ ವಂಶಸ್ಥರನ್ನು ಓಲೈಸಲು ಮೀಸಲಿಟ್ಟಿದ್ದಾರೆ. ರಾಜ್ಯದಲ್ಲಿ ಆಡಳಿತ ಸಂಪೂರ್ಣವಾಗಿ ಕುಸಿತ ಕಂಡಿದೆ.

ರಾಜ್ಯದಲ್ಲಿ ಮಹಿಳೆಯರ ಸುರಕ್ಷತೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದ್ದು, ಪ್ರತಿದಿನ ದೌರ್ಜನ್ಯ ಪ್ರಕರಣಗಳು ಹೆಚ್ಚತ್ತಲೇ ಇವೆ. ಕಾಂಗ್ರೆಸ್​ ಸರ್ಕಾರದ ವೈಫಲ್ಯದಿಂದಲ್ಲೇ ಈ ಘಟನೆ ನಡೆದಿದ್ದು, ಇಡೀ ನಾಗರೀಕ ಸಮಾಜ ತಲೆತಗ್ಗಿಸುವಂತಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಜನತೆ ಈಗಿರುವ ಕಾಂಗ್ರೆಸ್​ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net