ಭಾರತದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದಿಂದ ಪ್ರಜಾಪ್ರಭುತ್ವದ ಮೇಲೆ ದಾಳಿ; ಕೊಲಂಬಿಯಾದಲ್ಲಿ ರಾಹುಲ್ ಗಾಂಧಿ ಆರೋಪ| Rahul Gandhi

Untitled design - 2025-10-03T080335.178
Published on

Rahul Gandhi: ವಿದೇಶದಲ್ಲಿ ನಿಂತು ಭಾರತದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಜಾಪ್ರಭುತ್ವದ ಮೇಲೆ ಸಂಪೂರ್ಣ ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ(ಅ. 02) ಮತ್ತೊಮ್ಮೆ ಆರೋಪ ಮಾಡಿದ್ದಾರೆ.

ಕೊಲಂಬಿಯಾದ ಇಐಎ ವಿಶ್ವವಿದ್ಯಾಲಯದಲ್ಲಿ ನಡೆದ ಸಂವಾದದಲ್ಲಿ ಮಾತನಾಡಿರುವ ಅವರು, ಭಾರತದಲ್ಲಿ ನಡೆಯುತ್ತಿರುವ ಪ್ರಜಾಪ್ರಭುತ್ವದ ಮೇಲಿನ ದಾಳಿಯೇ ದೊಡ್ಡ ಅಪಾಯ. ಭಾರತವು ವಿವಿಧ ಧರ್ಮ, ಸಂಪ್ರದಾಯ, ಭಾಷೆಗಳನ್ನು ಹೊಂದಿದೆ. ವಾಸ್ತವವಾಗಿ ಅದರ ಎಲ್ಲಾ ಜನರ ನಡುವಿನ ಸಂಭಾಷಣೆಯೇ ಭಾರತ. ಇದೆಲ್ಲವಕ್ಕೂ ಸ್ಥಳಾವಕಾಶ ಬೇಕಾಗುತ್ತೆ, ಅದನ್ನು ಸೃಷ್ಟಿಸುವ ಉತ್ತಮ ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆ. ಆದರೆ ಪ್ರಸ್ತುತ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಭಾರತೀಯ ಮತ್ತು ಚೀನಾ ರಾಜಕೀಯ ವ್ಯವಸ್ಥೆ ಹೋಲಿಕೆ ಮಾಡಿ ಮಾತನಾಡಿರುವ ಅವರು, ಭಾರತದಲ್ಲಿ ಸುಮಾರು 16, 17 ವಿಭಿನ್ನ ಭಾಷೆಗಳು, ಎಂಟು ವಿಭಿನ್ನ ಧರ್ಮಗಳಿವೆ. ಈ ವಿಭಿನ್ನ ಸಂಪ್ರದಾಯಗಳು ಅಭಿವೃದ್ಧಿ ಹೊಂದಲು ಅವಕಾಶ ನೀಡುವುದು, ಅವುಗಳಿಗೆ ತಮ್ಮನ್ನು ತಾವು ವ್ಯಕ್ತಪಡಿಸಲು ಸ್ಥಳಾವಕಾಶ ನೀಡುವುದು ಭಾರತದಂತಹ ದೇಶಕ್ಕೆ ಬಹಳ ಮುಖ್ಯ. ಜನರನ್ನು ಹತ್ತಿಕ್ಕುವ ಮತ್ತು ಸರ್ವಾಧಿಕಾರಿ ವ್ಯವಸ್ಥೆಯನ್ನು ನಡೆಸುವ ಚೀನಾ ಮಾದರಿ ರಾಜಕೀಯ ನಾವು ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಉದಾಹರಣೆಗೆ, ಅಮೆರಿಕಾದಲ್ಲಿ ಟ್ರಂಪ್ ಜೊತೆ ಧ್ರುವೀಕರಣ  ಸೃಷ್ಟಿಸುತ್ತಿರುವ ಬಹುತೇಕ ಜನರು, ಉತ್ಪಾದನಾ ಕ್ಷೇತ್ರದಿಂದ ತಮ್ಮ ಉದ್ಯೋಗಗಳನ್ನು ಕಳೆದುಕೊಂಡವರೇ. ಚೀನಾ ವಿಶ್ವಕ್ಕೆ  ಅಧಿಕಾರಶಾಹಿ (ನಾನ್-ಡೆಮಾಕ್ರಟಿಕ್) ವ್ಯವಸ್ಥೆಯಲ್ಲಿ ಉತ್ಪಾದನೆಯನ್ನು ಹೇಗೆ ನಿರ್ವಹಿಸಬಹುದು ಎಂಬುದನ್ನು ತೋರಿಸಿದೆ, ಆದರೆ ನಾವು ಆ ರೀತಿಯಲ್ಲಿ ಮಾಡಲಾಗದು. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆಯೇ ಉತ್ಪಾದನೆಯನ್ನು ಅಭಿವೃದ್ಧಿಪಡಿಸುವುದು ಸವಾಲಾಗಿದೆ ಎಂದಿದ್ದಾರೆ.

ನೋಟು ರದ್ದತಿ, ಜಿಎಸ್​ಟಿಯಿಂದ ಮಧ್ಯಮ ವ್ಯವಹಾರ ನಾಶ

ಭಾರತದಲ್ಲಿ ಮಧ್ಯಮ ವ್ಯವಹಾರ ನಾಶಕ್ಕೆ ಕೇಂದ್ರ ಸರ್ಕಾರ ಪ್ರಮುಖ ಎರಡು ನೀತಿಗಳನ್ನು ತಂದಿತು. ಮೊದಲನೆಯೇದಾಗಿ, ನೋಟು ರದ್ದತಿ, ಇದು ಮೂಲಭೂತವಾಗಿ  ಸಣ್ಣ ಮತ್ತು ಮಧ್ಯಮ ವ್ಯವಹಾರಗಳನ್ನು ನಾಶಮಾಡಿತು. ದೊಡ್ಡ ಉದ್ಯಮಿಗಳು ನಮ್ಮ ಆರ್ಥಿಕತೆಯ ದೊಡ್ಡ ಭಾಗವನ್ನು ನಿಯಂತ್ರಿಸಲು ಅವಕಾಶ ಮಾಡಿಕೊಟ್ಟಿತು. ಎರಡನೆಯದಾಗಿ ಜಿಎಸ್​ಟಿ ಇದು,  ಮಧ್ಯಮ ಮತ್ತು ಸಣ್ಣ ವ್ಯವಹಾರಗಳಿಗೆ ಹಾನಿ ಮಾಡಿತು ಎಂದು ಹೇಳಿದ್ದಾರೆ.

ಭಾರತದಲ್ಲಿ ಕೇಂದ್ರೀಕೃತವಾದ ಭ್ರಷ್ಟಾಚಾರದ ದೊಡ್ಡ ವ್ಯವಸ್ಥೆಯೇ ಇದೆ. ಮೂರು ಅಥವಾ ನಾಲ್ಕು ವ್ಯವಹಾರಗಳು ಇಡೀ ಆರ್ಥಿಕತೆಯನ್ನು ಆಕ್ರಮಿಸಿಕೊಳ್ಳುತ್ತಿವೆ. ಪ್ರಧಾನಿಗಳಿಗೆ ಇವುಗಳ ಜೊತೆ ನೇರ ಸಂಬಂಧವಿದೆ. ಆ ಭ್ರಷ್ಟಾಚಾರ ಭಾರತದಾದ್ಯಂತ ವ್ಯಾಪಕವಾಗಿ ಹರಡಿದೆ ಎಂದು ಆರೋಪಿಸಿದ್ದಾರೆ.

ಆರ್​ಎಸ್​ಎಸ್​-ಬಿಜೆಪಿ ಸಿದ್ದಾಂತದ ಮೂಲದಲ್ಲೇ ಹೇಡಿತನವಿದೆ

ಚೀನಾ ಬಗ್ಗೆ ವಿದೇಶಾಂಗ ಸಚಿವ ಎಸ್​.ಜೈಶಂಕರ್ ಮತ್ತು ಮುಸ್ಲಿಂ ವ್ಯಕ್ತಿ ಥಳಿಸುವ ಬಗ್ಗೆ ವಿ.ಡಿ.ಸಾವರ್ಕರ್ ಹೇಳಿಕೆ ಉಲ್ಲೇಖಿಸಿ ಬಿಜೆಪಿ-ಆರ್​ಎಸ್ಎಸ್​ ಸಿದ್ದಾಂತದ ಹೃದಯ ಭಾಗದಲ್ಲೇ ಹೇಡಿತವಿದೆ ಎಂದು ವಾಗ್ದಾಳಿ ನಡೆಸಿದರು.

ವಿದೇಶಾಂಗ ಸಚಿವರ ಹೇಳಿಕೆಯನ್ನು ನೀವು ಗಮನಿಸಿದರೆ ಅವರು, 'ಚೀನಾ ನಮಗಿಂತ ಹೆಚ್ಚು ಶಕ್ತಿಶಾಲಿ. ನಾನು ಅವರೊಂದಿಗೆ ನಾವು ಹೇಗೆ ಹೋರಾಡಬೇಕು? ಎಂದು ಹೇಳುತ್ತಾರೆ. ಇದು ಸಿದ್ದಾಂತದ ಮೂಲದ ಹೇಡಿತನ. ಹಾಗೆಯೇ ಸಾವರ್ಕರ್ ತಮ್ಮ ಪುಸ್ತಕದಲ್ಲಿ, ಒಮ್ಮೆ ಅವರು ಮತ್ತು ಅವರ ಕೆಲವು ಸ್ನೇಹಿತರು ಒಬ್ಬ ಮುಸ್ಲಿಂ ವ್ಯಕ್ತಿಯನ್ನು ಹೊಡೆದರು, ಮತ್ತು ಆ ದಿನ ಅವರು ತುಂಬಾ ಸಂತೋಷಪಟ್ಟರು ಎಂದು ಬರೆದಿದ್ದಾರೆ. ಐದು ಜನರು ಒಬ್ಬ ವ್ಯಕ್ತಿಯನ್ನು ಹೊಡೆದರೆ, ಅದು ಅವರಲ್ಲಿ ಒಬ್ಬರಿಗೆ ಸಂತೋಷವನ್ನುಂಟುಮಾಡುತ್ತದೆ, ಅದು ಹೇಡಿತನ. ಇದು ದುರ್ಬಲ ಜನರನ್ನು ಹೊಡೆಯುವುದು ಆರ್‌ಎಸ್‌ಎಸ್ ಸಿದ್ಧಾಂತ ಎಂದು ಕಿಡಿಕಾರಿದ್ದಾರೆ.

ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ

ರಾಹುಲ್ ಗಾಂಧಿ ಹೇಳಿಕೆಗೆ ಕಿಡಿಕಾರಿರುವ ಬಿಜೆಪಿ ಸಂಸದ ರವಿಶಂಕರ್ ಪ್ರಸಾದ್, ವಿಜಯದಶಮಿಯಂದು ಭಾರತೀಯರಿಗೆ ಶುಭಾಶಯ ಕೋರುವ ಬದಲು ಗಾಂಧಿಯವರು "ಭಾರತದ ವಿರುದ್ಧ ಮಾತನಾಡಲು" ಆಯ್ಕೆ ಮಾಡಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಹುಲ್ ಗಾಂಧಿ ಅವರು ದೇಶವನ್ನು ಕೆಣಕುವ ಮತ್ತು ವಿದೇಶಿ ನೆಲದಲ್ಲಿದ್ದಾಗಲೂ ಜನರು ಅನುಭವಿಸುವ ಸ್ವಾತಂತ್ರ್ಯವನ್ನು ಪ್ರಶ್ನಿಸುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಅವರು ಪ್ರಧಾನಿ ಮೋದಿಯವರ ವಿರುದ್ಧ ನಿರಂತರವಾಗಿ ಸುಳ್ಳು ಆರೋಪಗಳನ್ನು ಮಾಡುತ್ತಾರೆ, ನಾಚಿಕೆಯಿಲ್ಲದೆ ಅವರನ್ನು ನಿಂದಿಸುತ್ತಾರೆ. ಭಾರತದಲ್ಲಿ ವಾಕ್ ಸ್ವಾತಂತ್ರ್ಯವಿಲ್ಲ ಎಂದು ವಿದೇಶಗಳಲ್ಲಿ ಹೇಳಿಕೊಳ್ಳುತ್ತಾರೆ. ರಾಹುಲ್ ಗಾಂಧಿ ಹೇಳುವ ಎಲ್ಲವೂ ಆಧಾರರಹಿತ. ಅವರು ವಿದೇಶದಲ್ಲಿದ್ದಾಗ ಭಾರತದಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು ಹೇಳುತ್ತಾರೆ ಎಂದಿದ್ದಾರೆ. (ಎಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net