

ಉತ್ತರ ಕನ್ನಡ: ಇಂದು ಉತ್ತರಕನ್ನಡದ ಜಿಲ್ಲಾ ಪಂಚಾಯತ್ ಸಂಭಾಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಮಂಕಾಳು ವೈದ್ಯ, "ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರನ್ನು ಅವರ ಪಕ್ಷದವರೇ ಕೆಳಗಿಳಿಸುತ್ತಾರೆ" ಎಂದು ಲೇವಡಿ ಮಾಡಿದ್ದಾರೆ.
ಇಂದು ಉತ್ತರಕನ್ನಡ ಜಿಲ್ಲೆಯಲ್ಲಿ ಬಿ.ವೈ. ವಿಜಯೇಂದ್ರ ಅವರ ಸ್ಥಾನದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಮಂಕಾಳು ವೈದ್ಯ, "ನೋಡಿ ವಿಜಯೇಂದ್ರ ಅವರಿಗೆ ಗೊತ್ತಿದೆ. ಅವರ ಅಪ್ಪ ಮುಖ್ಯಮಂತ್ರಿಗಳಾದಾಗಲೇ ಅವರನ್ನು ಇವರೆಲ್ಲಾ ಸೇರಿಕೊಂಡು ಇಳಿಸಿದ್ದಾರೆ. ಮತ್ತೇ ವಿಜಯೇಂದ್ರಗೆ ಬಿಡ್ತಾರಾ ಇವರು? ವ್ಯತ್ಯಾಸ ಏನಿದೆ? ಅಪ್ಪನನ್ನೇ ಇಳಿಸಿರುವವರಿಗೆ ಮಗನನ್ನು ಇಳಿಸುವುದು ಇವರ ಹೋರಾಟ ಇವಾಗ. ಆದ್ರೆ, ನಾವು ಈ ಕೆಲಸ ಮಾಡುವುದಿಲ್ಲ. ಆ ರೀತಿ ನಮಗೇನಿಲ್ಲ . ನಮ್ಮಲ್ಲಿ ಸ್ವಾಗತ ಮಾಡುತ್ತೇವೆ. ನಮಗೆ ವಿರೋಧ ಪಕ್ಷದವರು ಬಲಶಾಲಿಯಾಗಿರಬೇಕು" ಎಂದರು.
"ನಾವು ಜಾಗೃತರಾಗುತ್ತೇವೆ. ನಮಗೂ ಇನ್ನು ಹೆಚ್ಚಾಗಿ ಕೆಲಸ ಮಾಡಬೇಕು ಎಂಬ ಆಸಕ್ತಿ ಬರುತ್ತದೆ. ಅಂದ್ರೆ, ಮತ್ತಷ್ಟು ಚುರುಕಾಗುತ್ತೇವೆ. ನಾವು ಮಾಡಬೇಕಾದ ಕೆಲಸವನ್ನು ಅವರ ಪಕ್ಷದವರೇ ಮಾಡುತ್ತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಯೋಗ್ಯರಲ್ಲ ಎಂದು ಅವರ ಲೀಡರ್ಸ್ ಹೇಳುತ್ತಿರುವಾಗ, ನಾವೇನು ಹೇಳೋದು? ಏನೂ ಹೇಳುವ ಅವಶ್ಯಕತೆಯಿಲ್ಲ" ಎಂದರು.