

ಬೆಂಗಳೂರು: ಇಂದು ನವದೆಹಲಿಯಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೇಂದ್ರದ ಗೃಹ ಸಚಿವ ಅಮಿತ್ ಷಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡ ಅವರನ್ನು ಭೇಟಿ ಮಾಡಿ ಎನ್ಡಿಎ ಜೊತೆ ಜೆಡಿಎಸ್ ಮೈತ್ರಿ ನಿರ್ಧಾರವನ್ನು ಘೋಷಿಸಿದ್ದಾರೆ. ಇದರ ಬೆನ್ನಿಗೇ ಇತ್ತ ಕಾಂಗ್ರೆಸ್ ಈ ಹೊಸ ಮೈತ್ರಿ ವಿರುದ್ಧ ಕಿಡಿ ಕಾರಿದೆ.
ಜೆಡಿಎಸ್ ಇಂದು ಅಧಿಕೃತವಾಗಿ ಎನ್ಡಿಎ ಮೈತ್ರಿಕೂಟದೊಳಗೆ ವಿಲೀನವಾಗಿದೆ, ಇನ್ಮುಂದೆ ಜೆಡಿಎಸ್ ಪಕ್ಷವು ತನ್ನ ಹೆಸರಿನ ಮುಂದಿರುವ ಸೆಕ್ಯೂಲರ್ ಪದ ಕೈಬಿಡುವುದು ಒಳ್ಳೆಯದು. ಜೆಡಿಎಸ್ ಬದಲು ಕೇವಲ ಜೆಡಿ ಎಂದು ಇರಿಸಿಕೊಳ್ಳಬಹುದು ಎಂದು ಕಾಂಗ್ರೆಸ್ ಹೇಳಿದೆ.
ಜೆಡಿಎಸ್ ತನ್ನ ಹೆಸರನ್ನು ಜೆಡಿ ಅಥವಾ ಕೆಡಿ (KD) ಎಂದು ಕೂಡ ಬದಲಿಸಿಕೊಳ್ಳಬಹುದು, ಕೆಡಿ ಅಂದರೆ ಅಪಾರ್ಥ ಬೇಡ, KD ಅಂದರೆ “ಕಮಲ ದಳ” ಎಂದು ವ್ಯಾಖ್ಯಾನ ಮಾಡಿರುವ ಕಾಂಗ್ರೆಸ್, ಪಕ್ಷ ವಿಸರ್ಜಿಸುತ್ತೇನೆ ಎಂದವರು ಜಾತ್ಯತೀತತೆಯನ್ನೇ ವಿಸರ್ಜಿಸಿದ್ದಾರೆ, ಅಭಿನಂದನೆಗಳು ಎಂದೂ ವ್ಯಂಗ್ಯವಾಡಿದೆ.