

ನವದೆಹಲಿ: ರಾಷ್ಟ್ರರಾಜಧಾನಿಯಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾದ ನಂತರ ಬಿಜೆಪಿ ಮತ್ತು ಆಮ್ ಆದ್ಮಿ ಪಕ್ಷಗಳು ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ತೀವ್ರಗೊಳಿಸಿವೆ. ಮುಖ್ಯಮಂತ್ರಿ ಅತಿಶಿ(Chief Minister Atishi) ಬಿಜೆಪಿ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಆರೋಪ ಮಾಡಿದ್ದಾರೆ.
ಚುನಾವಣಾ ಆಯೋಗ ಇಂದು(ಮಂಗಳವಾರ, ಜನವರಿ 7) ದೆಹಲಿ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದೆ. ಅದಕ್ಕೂ ಹಿಂದಿನ ರಾತ್ರಿ ತಮಗೆ ನೀಡಿದ್ದ ಸಿಎಂ ನಿವಾಸದ ಹಂಚಿಕೆಯನ್ನು ಬಿಜೆಪಿ ಸರ್ಕಾರ ರದ್ದುಗೊಳಿಸಿದೆ. ನನ್ನ ಸರ್ಕಾರಿ ಭವನ, ಸಿಎಂ ನಿವಾಸದಿಂದ ಹೊರ ಹಾಕಿತು. ಚುನಾಯಿತ ಸರ್ಕಾರದ ಸಿಎಂ ಮನೆ ಕಿತ್ತುಕೊಂಡಿದೆ. ಅಧಿಕೃತ ನಿವಾಸದಿಂದ ಹೊರ ಹಾಕಿರುವುದು ಇದು ಎರಡನೇ ಬಾರಿ, 3 ತಿಂಗಳ ಹಿಂದೆಯೂ ನನಗೆ ಅದೇ ರೀತಿ ಮಾಡಲಾಗಿತ್ತು. ನಿವಾಸದಿಂದ ನನ್ನ ವಸ್ತುಗಳನ್ನು ಮನೆಯಿಂದ ಹೊರಗೆ ಎಸೆಯಲಾಗಿದೆ ಎಂದು ಅತಿಶಿ ಆರೋಪಿಸಿದ್ದಾರೆ.
ಎಎಪಿ ನಾಯಕ ಸೌರಭ್ ಭಾರದ್ವಾಜ್ ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ನಾವು ನೋಡುತ್ತಿರುವ ಬಿಜೆಪಿಯ ವ್ಯವಸ್ಥೆಯಿಂದ ದೆಹಲಿಯ ಜನರ ಬಗ್ಗೆ ಬಿಜೆಪಿಗೆ ಕಾಳಜಿ ಇಲ್ಲ ಎಂದು ತೋರುತ್ತದೆ. ವರ್ಷವಿಡೀ ಎಎಪಿ ನಾಯಕರನ್ನು ಹೇಗೆ ವಿಚಾರಣೆ ನಡೆಸಬೇಕು ಎಂಬ ಒಂದೇ ಒಂದು ಅಜೆಂಡಾವನ್ನು ಬಿಜೆಪಿ ಹೊಂದಿತ್ತು. ಅವರನ್ನು ಜೈಲಿಗೆ ಕಳುಹಿಸುವುದು ಹೇಗೆ. ಜೈಲಿನಲ್ಲಿ ಔಷಧಗಳನ್ನು ನಿಲ್ಲಿಸಬೇಕು. ದೇಶದ 75 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಹಿಂದೆಂದೂ ಮಾಡದ ಸಾಧನೆ ಮಾಡಿದೆ. ಮಹಿಳಾ ಸಿಎಂ ಅವರನ್ನು ಅಧಿಕೃತ ಮನೆಯಿಂದ ಹೊರಹಾಕಿದೆ ಎಂದು ಹೇಳಿದ್ದಾರೆ.
ದೆಹಲಿ ವಿಧಾನಸಭಾ ಚುನಾವಣೆ 2025 ಫೆಬ್ರವರಿ 5ರಂದು 70 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ನಡೆಯಲಿದ್ದು ಫೆ. 8ರಂದು ಮತ ಎಣಿಕೆ ನಡೆಯಲಿದೆ ಎಂದು ಭಾರತೀಯ ಚುನಾವಣಾ ಆಯೋಗ ಮಂಗಳವಾರ ಘೋಷಿಸಿತು.(ಏಜೆನ್ಸೀಸ್)