ವಾಷಿಂಗ್ಟನ್ ಡಿಸಿ: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಸೋಮವಾರ(ಜನವರಿ 6) ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ವರ್ಷ ಕೆನಡಾದಲ್ಲಿ ಚುನಾವಣೆಗಳು ನಡೆಯಲಿವೆ. ಪಕ್ಷವು ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಅವರು ಪ್ರಧಾನಿ ಹುದ್ದೆಯಲ್ಲಿ ಇರುತ್ತಾರೆ ಎಂದು ಟ್ರುಡೊ ತಿಳಿಸಿದ್ದಾರೆ. ಈ ನಡುವೆ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ತನ್ನ ಪ್ರಸ್ತಾಪವನ್ನು ಪುನರುಚ್ಚರಿಸಿದ್ದಾರೆ.
ಇದನ್ನು ಓದಿ: ತನ್ನ ವೈಫಲ್ಯಗಳಿಗೆ ನೆರೆಹೊರೆಯವರನ್ನು ದೂಷಿಸುವುದು ಪಾಕ್ನ ಹಳೇ ಅಭ್ಯಾಸ; ಭಾರತ ಹೀಗೆಳಿದ್ದೇಕೆ? | India
ಡೊನಾಲ್ಡ್ ಟ್ರಂಪ್ ಮತ್ತು ಟ್ರುಡೊ ಎಂದಿಗೂ ಉತ್ತಮ ಸಂಬಂಧವನ್ನು ಹೊಂದಿಲ್ಲ. ಕಳೆದ ವರ್ಷ ನವೆಂಬರ್ 5 ರಂದು ಮಾರ್-ಎ-ಲಾಗೋದಲ್ಲಿ ಅವರ ಚುನಾವಣಾ ವಿಜಯ ಮತ್ತು ಟ್ರುಡೊ ಅವರನ್ನು ಭೇಟಿಯಾದ ನಂತರ ಟ್ರಂಪ್ ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವ ಕಲ್ಪನೆಯನ್ನು ಪ್ರಸ್ತುತಪಡಿಸುತ್ತಿದ್ದಾರೆ.
ಕೆನಡಾದ ಅನೇಕ ಜನರು ದೇಶವು ಅಮೆರಿಕದ 51ನೇ ರಾಜ್ಯವಾಗಬೇಕೆಂದು ಬಯಸುತ್ತಾರೆ. ಕೆನಡಾ ತನ್ನ ಆರ್ಥಿಕತೆಯನ್ನು ತೇಲುವಂತೆ ಮಾಡಲು ಅಗತ್ಯವಿರುವ ದೊಡ್ಡ ವ್ಯಾಪಾರ ಕೊರತೆ ಮತ್ತು ಸಬ್ಸಿಡಿಗಳನ್ನು ಯುನೈಟೆಡ್ ಸ್ಟೇಟ್ಸ್ ಇನ್ನು ಮುಂದೆ ಸಹಿಸುವುದಿಲ್ಲ ಎಂದು ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಜಸ್ಟಿನ್ ಟ್ರುಡೊ ಅವರ ರಾಜೀನಾಮೆಯ ನಂತರ ಡೊನಾಲ್ಡ್ ಟ್ರಂಪ್, ಕೆನಡಾ ಅಮೆರಿಕಕ್ಕೆ ಸೇರಿದರೆ ಯಾವುದೇ ಸುಂಕಗಳನ್ನು ಪಾವತಿಸಬೇಕಾಗಿಲ್ಲ ಮತ್ತು ತೆರಿಗೆಗಳು ಬಹಳ ಕಡಿಮೆಯಾಗುತ್ತವೆ. ರಷ್ಯಾದ ಮತ್ತು ಚೀನಾದ ಹಡಗುಗಳ ಅಪಾಯಗಳಿಂದ ದೇಶದ ನಾಗರಿಕರು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತಾರೆ. ನಾವು ಒಟ್ಟಿಗೆ ಇದ್ದರೆ ದೊಡ್ಡ ದೇಶವಾಗಬಲ್ಲದು ಎಂದು ಹೇಳಿದ್ದಾರೆ.
ಟ್ರಂಪ್ ಅವರ ಈ ಮಾತಿಗೆ ಕೆನಡಾದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಟೊರೊಂಟೊ ತನ್ನ ದಕ್ಷಿಣ ಗಡಿಯ ಮೂಲಕ ಅಕ್ರಮ ಡ್ರಗ್ಸ್ ಮತ್ತು ಅಕ್ರಮ ವಲಸಿಗರ ಹರಿವನ್ನು ನಿಲ್ಲಿಸದಿದ್ದರೆ ಕೆನಡಾದ ಆಮದುಗಳ ಮೇಲೆ ಶೇಕಡಾ 25ರಷ್ಟು ಸುಂಕವನ್ನು ವಿಧಿಸುವುದಾಗಿ ಡೊನಾಲ್ಡ್ ಟ್ರಂಪ್ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಟ್ರುಡೊ ಅವರನ್ನು ‘ಕೆನಡಾದ ಮಹಾನ್ ರಾಜ್ಯದ ಗವರ್ನರ್’ ಎಂದು ಲೇವಡಿ ಮಾಡಿದ್ದಾರೆ ಎಂಬ ಪೋಸ್ಟ್ಅನ್ನು ಕೆಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.(ಏಜೆನ್ಸೀಸ್)