

ನವದೆಹಲಿ: ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಈ ಬಾರಿ 2025ರ ಮಹಾಕುಂಭಮೇಳವು ಬಹಳ ಅದ್ಧೂರಿಯಾಗಿ ನಡೆಯಲಿದೆ. ಜನವರಿ 13 ರಿಂದ ಫೆಬ್ರವರಿ 26 ರವರೆಗೆ ಆಯೋಜಿಸಲಾದ ಮಹಾಕುಂಭವನ್ನು ಅಡ್ಡಿಪಡಿಸುವುದಾಗಿ ನಿಷೇಧಿತ ಸಂಘಟನೆಯ ಸಿಖ್ ಫಾರ್ ಜಸ್ಟಿಸ್ ಮತ್ತು ಖಲಿಸ್ತಾನಿ ಭಯೋತ್ಪಾದಕ ಗುರುಪತ್ವಂತ್ ಸಿಂಗ್ ಪನ್ನು(Gurupatwant Singh Pannun) ಹೊಸ ಬೆದರಿಕೆ ಹಾಕಿದ್ದಾರೆ.
ಗುರು ಪತ್ವಂತ್ ಪನ್ನು ಇತ್ತೀಚೆಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪನ್ನು ಮಹಾಕುಂಭಕ್ಕೆ ಅಡ್ಡಿಪಡಿಸಲು 'ಪ್ರಯಾಗ್ರಾಜ್ ಚಲೋ'ಗೆ ಕರೆ ನೀಡುತ್ತಿದ್ದಾರೆ. ‘ಹಿಂದುತ್ವ ಸಿದ್ಧಾಂತವನ್ನು ಬೇರು ಸಮೇತ ಕಿತ್ತೆಸೆಯಿರಿ’ ಎಂದು ತನ್ನ ಬೆಂಬಲಿಗರಿಗೆ ಒತ್ತಾಯಿಸಿದ್ದಾರೆ. ಅಲ್ಲದೆ ವಿಡಿಯೋ ಕೊನೆಗೊಳಿಸುವ ಸಮಯದಲ್ಲಿ 'ಮಹಾ ಕುಂಭ ಪ್ರಯಾಗ್ರಾಜ್ 2025 ಯುದ್ಧಭೂಮಿಯಾಗಲಿದೆ' ಎಂದು ಹೇಳಿದ್ದಾರೆ.
ಪನ್ನು ಅವರ ಕರೆ ಪ್ರಚೋದನಕಾರಿ ಮಾತ್ರವಲ್ಲ ಅಪಾಯಕಾರಿಯೂ ಹೌದು. ಮಹಾಕುಂಭದಂತಹ ಆಧ್ಯಾತ್ಮಿಕ ಕಾರ್ಯಕ್ರಮವನ್ನು ಗುರಿಯಾಗಿಸಿಕೊಂಡು ಶತಮಾನಗಳಿಂದ ಶಾಂತಿಯುತವಾಗಿ ಬಾಳುತ್ತಿರುವ ಸಮುದಾಯಗಳ ನಡುವೆ ದ್ವೇಷದ ಬೀಜ ಬಿತ್ತಲು ಯತ್ನಿಸುತ್ತಿದ್ದಾರೆ.
ಅವರು ಈ ಹಿಂದೆ ವಿಮಾನ ನಿಲ್ದಾಣಗಳಲ್ಲಿ ಖಲಿಸ್ತಾನ್ ಮತ್ತು ಕಾಶ್ಮೀರದ ಧ್ವಜಗಳನ್ನು ಹಾರಿಸಲು ಒತ್ತಾಯಿಸುವುದು ಸೇರಿದಂತೆ ಪ್ರಚೋದನಕಾರಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೂ ಹೆಚ್ಚಿನ ಭಾರತೀಯರು ಗುರುಪತ್ವಾಂತ್ ಪನ್ನು ಅವರ ಈ ವಿಡಿಯೋವನ್ನು ನಾಟಕ ಮತ್ತು ಗಮನ ಸೆಳೆಯುವ ಪ್ರಯತ್ನಕ್ಕಿಂತ ಹೆಚ್ಚೇನೂ ಅಲ್ಲ ಎಂದು ಪರಿಗಣಿಸುತ್ತಾರೆ.
10 ದಿನಗಳಲ್ಲಿ ಮಹಾಕುಂಭವನ್ನು ಗುರಿಯಾಗಿಸಿಕೊಂಡು ಪನ್ನು ಅವರ ಎರಡನೇ ಬೆದರಿಕೆ ಇದಾಗಿದೆ. ಹಿಂದಿನ ವಿಡಿಯೋದಲ್ಲಿ ಮಕರ ಸಂಕ್ರಾಂತಿ (ಜನವರಿ 14), ಮೌನಿ ಅಮಾವಾಸ್ಯೆ (ಜನವರಿ 29) ಮತ್ತು ಬಸಂತ್ ಪಂಚಮಿ (ಫೆಬ್ರವರಿ 3) ಸೇರಿದಂತೆ ಪ್ರಮುಖ ಧಾರ್ಮಿಕ ಹಬ್ಬದ ದಿನಗಳನ್ನು ಅಡ್ಡಿಪಡಿಸುವುದಾಗಿ ಬೆದರಿಕೆ ಹಾಕಿದ್ದರು.(ಏಜೆನ್ಸೀಸ್)