

ಪಾಟ್ನಾ: ಬಿಹಾರದ ಚುನಾವಣಾ ಕಣ ರಂಗೇರಿದ್ದು, ಜನ್ ಸುರಾಜ್ ಪಕ್ಷದ ಮೂವರು ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್( Prashant Kishor), ಬಿಜೆಪಿ ಸೋಲುವ ಭಯದಿಂದ ನಮ್ಮ ಅಭ್ಯರ್ಥಿಗಳ ಮೇಲೆ ಒತ್ತಡ, ಬೆದರಿಕೆ ಹಾಕುತ್ತಿದೆ ಎಂದು ಮಂಗಳವಾರ (ಅ. 21) ಆರೋಪಿಸಿದ್ದಾರೆ.
ಪಾಟ್ನಾದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಪಾಲಗಂಜ್, ದಾನಾಪುರ ಹಾಗೂ ಬ್ರಹ್ಮಪುರ ವಿಧಾನಸಭಾ ಕ್ಷೇತ್ರದಿಂದ ಜನ ಸುರಾಜ್ ಪಕ್ಷದ ಮೂವರು ಅಭ್ಯರ್ಥಿಗಳು ಬಿಜೆಪಿಯ ಬೆದರಿಕೆ, ಕುಟುಂಬದ ಒತ್ತಡ ಅಥವಾ ಆಮಿಷದ ಮೇರೆಗೆ ಕೊನೆಯ ದಿನಾಂಕದಂದು ತಮ್ಮ ನಾಮಪತ್ರವನ್ನು ಹಿಂತೆಗೆದುಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಹಿರಿಯ ವೈದ್ಯ ಡಾ. ಶಶಿ ಶೇಖರ್ ಸಿನ್ಹಾ ಅವರು ಆರೋಗ್ಯ ಕಾರಣಗಳನ್ನು ಉಲ್ಲೇಖಿಸಿ ಗೋಪಾಲ್‌ಗಂಜ್ ಸದರ್‌ನಿಂದ ತಮ್ಮ ನಾಮಪತ್ರವನ್ನು ಹಠಾತ್ತನೆ ಹಿಂತೆಗೆದುಕೊಂಡಿದ್ದಾರೆ. ದಾನಾಪುರ್ ಕ್ಷೇತ್ರದಿಂದ ಅಖಿಲೇಶ್ ಕುಮಾರ್ ಅಲಿಯಾಸ್ ಮುತೂರ್ ಸಾವೊ ಕೊನೆಯ ದಿನದಂದು ನಾಮಪತ್ರ ಸಲ್ಲಿಸಲಿಲ್ಲ. ಹಲವು ಗಂಟೆಗಳ ಕಾಲ ನಮ್ಮ ಸಂಪರ್ಕಕ್ಕೆ ಸಿಗಲಿಲ್ಲ. ಬಳಿಕ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಇದ್ದಾರೆ ಎಂದು ನಮಗೆ ತಿಳಿಯಿತು ಎಂದಿದ್ದಾರೆ.
ಬ್ರಹ್ಮಪುರ ಕ್ಷೇತ್ರದಲ್ಲಿ ಡಾ. ಸತ್ಯ ಪ್ರಕಾಶ್ ತಿವಾರಿ ತಮ್ಮ ನಾಮಪತ್ರ ಸಲ್ಲಿಸಿದರು. ಆದರೆ ಸ್ವಲ್ಪ ಸಮಯದಲ್ಲೇ ನಾಮಪತ್ರವನ್ನು ಹಿಂತೆಗೆದುಕೊಂಡರು. ಅದೇ ರೀತಿ, ವಾಲ್ಮೀಕಿನಗರ ಅಭ್ಯರ್ಥಿ ದೀರ್ಘ ನಾರಾಯಣ ಪ್ರಸಾದ್ ಅವರ ರಾಜೀನಾಮೆಯನ್ನು ಸುಮಾರು ಎರಡು ವರ್ಷಗಳ ಹಿಂದೆ ಬ್ಲಾಕ್ ಶಿಕ್ಷಣ ಅಧಿಕಾರಿ ಅಂಗೀಕರಿಸಿದ್ದರು. ಆದರೆ ಈಗ ಅವರ ರಾಜೀನಾಮೆಯನ್ನು ಅಂಗೀಕರಿಸಲಾಗಿಲ್ಲ ಎಂದು ಅವರಿಗೆ ಹೇಳಲಾಗುತ್ತಿದೆ.
ಜೆಎಸ್ಪಿ ಪಕ್ಷದ ಉಪಸ್ಥಿತಿಯಿಂದಾಗಿ ಎನ್‌ಡಿಎ ನಾಯಕರು ಸೋಲಿನ ಭಯದಲ್ಲಿರುವುದು ಈ ನಿದರ್ಶನಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಆದಾಗ್ಯೂ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಧರ್ಮೇಂದ್ರ ಪ್ರಧಾನ್ ಸೇರಿದಂತೆ ಬಿಜೆಪಿ ನಾಯಕರ ಇಂತಹ ರಾಜಕೀಯ ತಂತ್ರಗಳು ಯಶಸ್ವಿಯಾಗುವುದಿಲ್ಲ. ಯಾಕಂದರೆ ಬಿಹಾರದ ಜನರು ಎನ್‌ಡಿಎ ಸರ್ಕಾರವನ್ನು ಕಿತ್ತೊಗೆಯಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.
ಚುನಾವಣೆಯ ಸಮಯದಲ್ಲಿ ಅಭ್ಯರ್ಥಿಗಳನ್ನು ಬೆದರಿಕೆ, ವಾಪಸ್ ಪಡೆಯುವಂತ ತಂತ್ರಗಳಿಂದ ರಕ್ಷಿಸಲು ಮುಖ್ಯ ಚುನಾವಣಾ ಅಧಿಕಾರಿ ಮಧ್ಯಪ್ರವೇಶಿಸಬೇಕು.ಇದು ಗಂಭೀರ ವಿಷಯವಾಗಿದ್ದು, ಚುನಾವಣಾ ಆಯೋಗವು ತಕ್ಷಣವೇ ಇದರ ಬಗ್ಗೆ ಗಮನಹರಿಸಬೇಕು. ಇಸಿಐ ಅಭ್ಯರ್ಥಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮತದಾರರನ್ನು ಬಲವಂತ ಅಥವಾ ಬೆದರಿಕೆಯಿಂದ ಹೇಗೆ ರಕ್ಷಿಸಬಹುದು? ರಾಜ್ಯದಲ್ಲಿ ಚುನಾವಣೆಗಳನ್ನು ಗೆಲ್ಲಲು ಬಿಜೆಪಿಯ ಹೊಸ ತಂತ್ರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)