ಉಪಚುನಾವಣೆಗೆ BJP ಅಭ್ಯರ್ಥಿಗಳ ಪಟ್ಟಿ ರಿಲೀಸ್​; ಶಿಗ್ಗಾಂವಿಯಲ್ಲಿ ಭರತ್​, ಸಂಡೂರಿನಲ್ಲಿ ಬಂಗಾರುಗೆ ಟಿಕೆಟ್​

By Election Candidates
Published on

ನವದೆಹಲಿ: ಮೇ ತಿಂಗಳಲ್ಲಿ ಮುಕ್ತಾಯಗೊಂಡ ಲೋಕಸಭೆ ಚುನಾವಣೆಯಲ್ಲಿ (Loksabha election) ಸಂಸದರಾಗಿ ಆಯ್ಕೆಯಾದ ಶಾಸಕರಿಂದ ತೆರವುಗೊಂಡಿರುವ ರಾಜ್ಯದ ಶಿಗ್ಗಾಂವಿ, ಸಂಡೂರು ಹಾಗೂ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣಾ ಆಯೋಗ (Election Commission) ಕೆಲವು ದಿನಗಳ ಉಪಚುನಾವಣೆಯನ್ನು (By Election) ಘೋಷಿಸಿತ್ತು.

ಉಪಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿ (BJP) ಶಿಗ್ಗಾಂವಿ (Shiggaon) ಹಾಗೂ ಸಂಡೂರು (Sandur) ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಇನ್ನಷ್ಟೇ ಘೋಷಿಸಿದೆ. ಅದರಂತೆ ಶಿಗ್ಗಾಂವಿ ಕ್ಷೇತ್ರಕ್ಕೆ ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ್​ ಬೊಮ್ಮಾಯಿ ಅವರ ಪುತ್ರ ಭರತ್​ಗೆ (Bharath Bommai) ಹೈಕಮಾಂಡ್​ ಮಣೆ ಹಾಕಿದ್ದು, ಸಂಡೂರು ಕ್ಷೇತ್ರದಲ್ಲಿ  ಎಸ್ಟಿ ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತುರನ್ನು (Bangaru Hanumanthu) ಕಣಕ್ಕಿಳಿಸಿದೆ. ಚನ್ನಪಟ್ಟಣ ಕ್ಷೇತ್ರಕ್ಕೆ ಇನ್ನಷ್ಟೇ ಅಭ್ಯರ್ಥಿಯನ್ನು ಘೋಷಿಸಬೇಕಿದೆ.

BJP List

ಚನ್ನಪಟ್ಟಣ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟಿದ್ದು, ಅಭ್ಯರ್ಥಿ ಆಯ್ಕೆ ಕಗ್ಗಂಟಾಗಿದೆ. ಅಭ್ಯರ್ಥಿ ಅಂತಿಮಗೊಳಿಸಲು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಸಭೆ ನಡೆದರೂ ಸ್ಪಷ್ಟ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಭಾನುವಾರ ದೆಹಲಿಯಲ್ಲಿ ವರಿಷ್ಠರ ಜತೆ ಚರ್ಚಿಸಿ ಅಂತಿಮ ನಿರ್ಧಾರಕ್ಕೆ ಬರಲು ಉಭಯ ಪಕ್ಷಗಳ ನಾಯಕರು ತೀರ್ಮಾನಿಸಿದ್ದಾರೆ.

ಬಿಜೆಪಿ ರಾಜ್ಯ ಘಟಕದ ಪಟ್ಟಿ ಬರುವ ಮುನ್ನವೇ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಿರುವುದು ರಾಜ್ಯ ನಾಯಕರ ಅಚ್ಚರಿಗೆ ಕಾರಣವಾಗಿದೆ. ಇನ್ನೂ ಕಾಂಗ್ರೆಸ್​ ಪಾಳಯದಲ್ಲಿ ಟಿಕೆಟ್​ ಹಂಚಿಕೆ ವಿಚಾರವಾಗಿ ನಾಯಕರು ಸರಣಿ ಸಭೆಗಳನ್ನು ನಡೆಸುತ್ತಿದ್ದು, ಸ್ಥಳೀಯ ನಾಯಕರ ಹಾಗೂ ಮುಖಂಡರ ಅಭಿಪ್ರಾಯವನ್ನು ಸಂಗ್ರಹಿಸುತ್ತಿದೆ.

ಶಿಗ್ಗಾಂವಿ, ಸಂಡೂರು, ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಗಳಿಗೆ ನವೆಂಬರ್​ 13ರಂದು ನಡೆಯಲಿದ್ದು, ನವೆಂಬರ್​ 23ರಂದು ಫಲಿತಾಂಶ ಪ್ರಕಟವಾಗಲಿದೆ. ಶಿಗ್ಗಾಂವಿ ಶಾಸಕರಾಗಿದ್ದ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಹಾವೇರಿಯಿಂದ, ಚನ್ನಪಟ್ಟಣ ಶಾಸಕರಾಗಿದ್ದ ಎಚ್.ಡಿ. ಕುಮಾರಸ್ವಾಮಿ ಮಂಡ್ಯ ಕ್ಷೇತ್ರದಿಂದ, ಸಂಡೂರು ಶಾಸಕರಾಗಿದ್ದ ತುಕಾರಂ ಅವರ ಬಳ್ಳಾರಿ ಲೋಕಸಭೆಗೆ ಪ್ರವೇಶಿಸಿದ ಬೆನ್ನಲ್ಲೇ ಶಾಸಕ ಸ್ಥಾನಗಳು ತೆರವಾಗಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net