

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ (Team India) ಹಾಗೂ ನ್ಯೂಜಿಲೆಂಡ್ (NewZealand) ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಸರ್ಫರಾಜ್ ಖಾನ್ (Sarfaraz Khan) ಹಾಗೂ ರಿಷಭ್ ಪಂತ್ (Rishabh Pant) ಸ್ಫೋಟಕ ಆಟದ ಫಲವಾಗಿ ಆತಿಥೇಯರು ಪ್ರವಾಸಿಗರ ಎದುರು 82 ರನ್ಗಳ ಮುನ್ನಡೆ ಸಾಧಿಸಿದ್ದು, ಮೊದಲ ಟೆಸ್ಟ್ ಪಂದ್ಯ ರೋಚಕ ಹಂತದತ್ತ ಸಾಗಿದೆ. ಇನ್ನೂ ಒಂದು ದಿನದ ಆಟ ಬಾಕಿ ಉಳಿದಿದ್ದು, ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂದು ಕಾದು ನೋಡಬೇಕಿದೆ.
03 ವಿಕೆಟ್ ನಷ್ಟದೊಂದಿಗೆ ನಾಲ್ಕನೇ ದಿನದಾಟ ಆರಂಭಿಸಿದ ಭಾರತ ತಂಡವು ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ (150 ರನ್, 195 ಎಸೆತ, 18 ಬೌಂಡರಿ, 3 ಸಿಕ್ಸರ್), ವಿಕೆಟ್ ಕೀಪರ್, ಬ್ಯಾಟರ್ ರಿಷಭ್ ಪಂತ್ (Rishabh Pant) (99 ರನ್, 105 ಎಸತ, 9 ಬೌಂಡರಿ, 5 ಸಿಕ್ಸರ್) ಶತಕವಂಚಿತ ಆಟದ ಫಲವಾಗಿ 82 ರನ್ಗಳ ಮುನ್ನಡೆ ಸಾಧಿಸಿದ್ದು, ರಿಷಭ್ ಪಂತ್ (Rishabh Pant) ಟೀಮ್ ಇಂಡಿಯಾದ ಲೆಜೆಂಡರಿ ಆಟಗಾರ ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಸರಿಗಟ್ಟುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸರ್ಫರಾಜ್ ಖಾನ್ ಜೊತೆ 177ರನ್ಗಳ ಭರ್ಜರಿ ಜತೆಯಾಟವಾಡಿದ ರಿಷಭ್ ಪಂತ್ (Rishabh Pant) ಟೆಸ್ಟ್ ಕ್ರಿಕೆಟ್‌ನಲ್ಲಿ 2,500 ಸಾವಿರ ರನ್ ಗಳಿಸಿದ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 62 ಇನ್ನಿಂಗ್ಸ್‌ನಲ್ಲಿ ರಿಷಭ್ ಪಂತ್ ಈ ಸಾಧನೆ ಮಾಡಿದ್ದು, ಇದಕ್ಕೂ ಮುನ್ನ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ 69 ಇನ್ನಿಂಗ್ಸ್‌ನಲ್ಲಿ ಈ ಸಾಧನೆ ಮಾಡಿದ್ದು, 92 ವರ್ಷಗಳ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ 65 ಇನ್ನಿಂಗ್ಸ್ಗೂ ಕಡಿಮೆ ಅವಧಿಯಲ್ಲಿ 2,500 ರನ್ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ದಾಖಲೆಗೆ ರಿಷಭ್ (Rishabh Pant) ಭಾಜನರಾಗಿದ್ದಾರೆ.
ರಿಷಬ್ ಪಂತ್ (Rishabh Pant) ಟೆಸ್ಟ್ ವೃತ್ತಿಜೀವನದಲ್ಲಿ 99 ರನ್ ಗಳಿಸಿ ಔಟಾಗಿರುವುದು ಇದೇ ಮೊದಲು. ಅದೇ ಸಮಯದಲ್ಲಿ, ಭಾರತೀಯ ಟೆಸ್ಟ್ ಕ್ರಿಕೆಟ್‌ನಲ್ಲಿ 12 ವರ್ಷಗಳ ನಂತರ, ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ಒಬ್ಬ 99 ರನ್ ಗಳಿಸಿ ಔಟಾಗಿರುವ ಘಟನೆ ನಡೆದಿದೆ. ಇದಕ್ಕೂ ಮುನ್ನ 2012 ರಲ್ಲಿ ಎಂಎಸ್ ಧೋನಿ 99 ರನ್ ಗಳಿಸಿ ಔಟಾಗಿದ್ದರು. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಧೋನಿ 99 ರನ್ ಗಳಿಸಿ ರನೌಟ್ ಆಗಿದ್ದರು. ಈಗ 12 ವರ್ಷಗಳ ನಂತರ ಪಂತ್ ವಿಷಯದಲ್ಲಿ ಇದು ಸಂಭವಿಸಿದೆ. ಇದಲ್ಲದೇ ಟೆಸ್ಟ್‌ನಲ್ಲಿ 99 ರನ್‌ಗಳಿಗೆ ಔಟಾದ ಭಾರತದ 5ನೇ ಬ್ಯಾಟ್ಸ್‌ಮನ್ ಎಂಬ ಬೇಡದ ದಾಖಲೆ ರಿಷಬ್ ಪಂತ್ ಪಾಲಾಗಿದೆ. ಪಂತ್ ಮತ್ತು ಧೋನಿ ಹೊರತುಪಡಿಸಿ, ಮುರಳಿ ವಿಜಯ್, ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಕೂಡ 99 ರನ್ಗೆ ಔಟಾಗಿ ಕೇವಲ 1 ರನ್ನಿಂದ ಶತಕವಂಚಿತರಾಗಿದ್ದರು.
ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಆದರೆ ಎರಡನೇ ಇನ್ನಿಂಗ್ಸ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿರುವ ರೋಹಿತ್ ಪಡೆ, ನಾಲ್ಕನೇ ದಿನದ ಚಹಾ ವಿರಾಮದ ವೇಳೆಗೆ 6 ವಿಕೆಟ್ ಕಳೆದುಕೊಂಡು 438 ರನ್ ಗಳಿಸಿ 82 ರನ್ ಮುನ್ನಡೆ ಸಾಧಿಸಿದೆ. ದೊಡ್ಡ ಮೊತ್ತ ಕಲೆ ಹಾಕುವಲ್ಲಿ ಟೀಂ ಇಂಡಿಯಾ ಯಶಸ್ವಿಯಾದರೆ ಪಂದ್ಯವನ್ನೂ ಗೆಲ್ಲಬಹುದಾಗಿದೆ.