

ಮುಂಬೈ: ಮುಂದಿನ ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ (Assembly Elections) ನಡೆಯಲಿರುವ ಮಹಾರಾಷ್ಟ್ರದಲ್ಲಿ (Maharashtra) ಈಗಾಗಲೇ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ಆಡಳಿತ ಹಾಗೂ ವಿರೋಧ ಪಕ್ಷಗಳು ತಂತ್ರ-ಪ್ರತಿತಂತ್ರ ಹೆಣೆಯುವುದರಲ್ಲಿ ನಿರತವಾಗಿವೆ. ಚುನಾವಣೆ ಸಮಯದಲ್ಲಿ ಆರೋಪ-ಪ್ರತ್ಯಾರೋಪ ಸಾಮಾನ್ಯ. ಆದರೆ, ಇದೀಗ ವಂಚಿತ್ ಬಹುನ್ ಆಘಾಡಿ (VBA) ಮುಖ್ಯಸ್ಥ ಪ್ರಕಾಶ್ ಅಂಬೇಡ್ಕರ್ (Prakash Ambedkar) ಮಾಡಿರುವ ಆರೋಪ ರಾಷ್ಟ್ರ ರಾಜಕಾರಣದಲ್ಲಿ ಹೊಸ ಸಂಚಲವನ್ನ ಸೃಷ್ಟಿಸಿದ್ದು, ವಿಪಕ್ಷಗಳ ಕುರಿತಾಗಿ ಹೊಸ ಚರ್ಚೆಗೆ ನಾಂದಿ ಹಾಡಿದೆ.
ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯ ಮುಖ್ಯಸ್ಥ ಶರದ್ ಪವಾರ್ (Sharad Pawar) ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕುಖ್ಯಾತ ಗ್ಯಾಂಗ್ಸ್ಟರ್ ದಾವೂದ್ ಇಬ್ರಾಹಿಂನನ್ನು ದುಬೈನಲ್ಲಿ ಭೇಟಿಯಾಗಿದ್ದರು. ದಾವೂದ್ ಇಬ್ರಾಹಿಂನನ್ನು ಭೇಟಿ ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆಯೇ ಎಂಬುದನ್ನು ಖಚಿತಪಡಿಸಲು ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಪ್ರಕಾಶ್ ಅಂಬೇಡ್ಕರ್ (Prakash Ambedkar) ಆರೋಪಿಸಿದ್ದಾರೆ.
ಶರದ್ ಪವಾರ್ (Sharad Pawar) ಅವರು 1988 ರಿಂದ 1991 ರವರೆಗೆ ಮುಖ್ಯಮಂತ್ರಿಯಾಗಿದ್ದರು. ಆ ಅವಧಿಯಲ್ಲಿ ವಿದೇಶ ಪ್ರವಾಸ ಮಾಡಿದ್ದರು. ಮೊದಲು ಲಂಡನ್‌ಗೆ ಹೋಗಿದ್ದರು, ನಂತರ ಕ್ಯಾಲಿಫೋರ್ನಿಯಾದಲ್ಲಿ ಸಭೆ ಒಂದರ ಸಲುವಾಗಿ ಎರಡು ದಿನ ಕಳೆದಿದ್ದರು. ಬಳಿಕ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಭೇಟಿಯಾದರು. ಆ ದಿನ ಸಂಜೆ ಪವಾರ್ ಲಂಡನ್‌ಗೆ ತೆರಳಿ ಎರಡು ದಿನಗಳ ನಂತರ ಭಾರತಕ್ಕೆ ಮರಳಿದ್ದರು. ಈ ಸಭೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತಾ ಎಂದು ಪ್ರಶ್ನಿಸಿದ್ದಾರೆ.
ನಾನು ಯಾವುದೇ ಆರೋಪ ಮಾಡಿಲ್ಲ, ಆದರೆ ನಾನು ಕೆಲವು ಸತ್ಯಗಳನ್ನು ಸಮಾಜದ ಮುಂದಿಟ್ಟಿದ್ದೇನೆ. ಮುಖ್ಯಮಂತ್ರಿಯಾಗಿ ಪವಾರ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ವಿದೇಶ ಪ್ರವಾಸ ಮಾಡಲು ಸಾಧ್ಯವಿಲ್ಲ. ಅಲ್ಲದೇ ಸಭೆಗಳ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆಯೇ. ದಾವುದ್ ಇಬ್ರಾಹಿಂ ಹಾಗೂ ಪವಾರ್ ಅವರ ಈ ಭೇಟಿಯ ವಿಶೇಷತೆ ಏನು ಎಂದು ಬಹಿರಂಗಪಡಿಸಬೇಕು ಎಂದು ಪ್ರಕಾಶ್ ಅಂಬೇಡ್ಕರ್ (Prakash Ambedkar) ಆಗ್ರಹಿಸಿದ್ದಾರೆ.
288 ಸದಸ್ಯಬಲದ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಮತದಾನ ನಡೆಯಲಿದ್ದು, 23ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆ ಸಮೀಪಿಸುತ್ತಿರುವ ನಡುವೆಯೇ ಪ್ರಕಾಶ್ ಅಂಬೇಡ್ಕರ್ ಅವರ ಈ ಹೇಳಿಕೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ವಿಪಕ್ಷಗಳು ಈ ಆರೋಪವನ್ನು ಹೇಗೆ ಎದುರಿಸಲಿದೆ ಎಂದು ಕಾದು ನೋಡಬೇಕಿದೆ. ‘